ಬೀದರ್: ಗಾಳಿಪಟಕ್ಕೆ ಬಳಸುವ ಅಪಾಯಕಾರಿ ಮಾಂಜಾ ದಾರ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಕುತ್ತಿಗೆಯನ್ನು ಮಾಂಜಾ ದಾರ ಕತ್ತರಿಸಿದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಬಂಬುಳಗಿ ಗ್ರಾಮದ ನಿವಾಸಿ ಸಂಜೀವ್ ಕುಮಾರ್ ಹೊಸಮನಿ (48) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ, ಹುಮನಾಬಾದ್ ಪಟ್ಟಣದ ಹಾಸ್ಟೆಲ್ನಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಮನೆಗೆ ಕರೆತರಲು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ತಾಳಮಡಗಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ಮಾಂಜಾ ದಾರ ಸಂಜೀವ್ ಅವರ ಕುತ್ತಿಗೆಗೆ ಸಿಲುಕಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಜೀವ್ ಕುಮಾರ್ ಹೊಸಮನಿ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನ ತಂದೆಯಾಗಿದ್ದು, ನಾಲ್ಕೂ ಮಕ್ಕಳು ವಿದ್ಯಾಭ್ಯಾಸದಲ್ಲಿದ್ದಾರೆ. ಕುಟುಂಬದ ಮುಖ್ಯ ಆಧಾರವಾಗಿದ್ದ ಸಂಜೀವ್ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಮೃತದೇಹವನ್ನು ಮನ್ನಾಏಖೆಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಮತ್ತೆ ಮಾಂಜಾ ದಾರದ ಅಪಾಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.



