ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬಳಿಕ ಅವರನ್ನು ಕೋರ್ಟ್ಗೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದಾರೆ.
ಕೋರ್ಟ್ನಲ್ಲಿ ವಿಚಾರಣೆ ವೇಳೆ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಸಲ್ಲಿಸಲು ಸಿಐಡಿ ಸಜ್ಜಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಅಜಿತ್ ಹಾಗೂ ಬೈರತಿ ಬಸವರಾಜ್ ಮತ್ತು ಮೃತ ಬಿಕ್ಲು ಶಿವ ನಡುವೆ ಸಾಕಷ್ಟು ವ್ಯವಹಾರ ನಡೆದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಆ ವ್ಯವಹಾರಗಳ ಕುರಿತಾಗಿ ಆಳವಾದ ತನಿಖೆ ನಡೆಸಲು ಕಸ್ಟಡಿ ಅಗತ್ಯವೆಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕೊಲೆಯಾದ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪವೂ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್ನಲ್ಲಿ ಆಡಿಯೋ ದಾಖಲೆ ಪತ್ತೆಯಾಗಿದೆ ಎಂಬ ಮಾಹಿತಿ ತನಿಖಾ ವಲಯದಲ್ಲಿ ಚರ್ಚೆಯಲ್ಲಿದೆ. ಇನ್ನೂ ಆರೋಪಿ ಜಗದೀಶ್ ಪರಿಚಯವಿಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದರೂ, ಜಗದೀಶ್ ಜೊತೆ ವಿವಿಧ ಕಾರ್ಯಕ್ರಮಗಳು, ಜನ್ಮದಿನ ಸಮಾರಂಭಗಳು ಹಾಗೂ ದೇವಸ್ಥಾನ ಭೇಟಿ ಮಾಡಿರುವ ಚಿತ್ರಗಳು ಮತ್ತು ಮಾಹಿತಿ ಲಭ್ಯವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.
ಈ ಹಿಂದೆ ಬೈರತಿ ಬಸವರಾಜ್ ಹಾಗೂ ಬಿಕ್ಲು ಶಿವ ನಡುವೆ ಜಮೀನು ವಿವಾದ ಸಂಬಂಧ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಅವಲಹಳ್ಳಿ, ಕೆಆರ್ ಪುರ ಹಾಗೂ ಭಾರತೀನಗರ ಪೊಲೀಸ್ ಠಾಣೆಗಳಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರುಗಳು ದಾಖಲಾಗಿದ್ದವು ಎಂಬುದು ತಿಳಿದುಬಂದಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಸಾಮಾನ್ಯ ಕ್ಲಿನಿಕಲ್ ಪರೀಕ್ಷೆ, ರಕ್ತದೊತ್ತಡ, ಶುಗರ್ ಮಟ್ಟ, ಇಸಿಜಿ ಪರೀಕ್ಷೆ ಸೇರಿದಂತೆ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಯಲಿದೆ. ಈಗಾಗಲೇ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಅಗತ್ಯವಿದ್ದರೆ ಚಿಕಿತ್ಸೆ ಸೂಚಿಸಲಾಗುತ್ತದೆ.



