ಬೆಂಗಳೂರು:- ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಭೈರತಿ ಬಸವರಾಜು ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಹಿನ್ನಡೆ ಉಂಟಾಗಿದೆ.
ಪ್ರಕರಣ ಸಂಬಂಧ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ತಿರಸ್ಕರಿಸಿದೆ. ಆದರೆ ಈ ಪ್ರಕರಣಕ್ಕೆ ಕೋಕಾ (KCOCA) ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಅಲ್ಲಿಯವರೆಗೆ ಬಂಧನದಿಂದ ರಕ್ಷಣೆ ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಇದರಿಂದ ಭೈರತಿ ಬಸವರಾಜು ಬಂಧನ ಭೀತಿಯನ್ನು ಎದುರಿಸುವಂತಾಗಿದೆ. ಇತ್ತ, ಕೋಕಾ ಕಾಯ್ದೆ ಅನ್ವಯವಿಲ್ಲ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಇತರ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
2025ರ ಜುಲೈ 15ರಂದು ಬೆಂಗಳೂರಿನ ಹಲಸೂರು ಬಳಿಯ ಭಾರತಿನಗರದ ಮೀನಿ ಅವೆನ್ಯೂ ರಸ್ತೆಯಲ್ಲಿ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವನನ್ನು ಮಾರಕ ಆಯುಧಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶಿವನ ತಾಯಿಯ ದೂರಿನ ಆಧಾರದಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜು ಅವರನ್ನು ಎಫ್‌ಐಆರ್‌ನಲ್ಲಿ ಐದನೇ ಆರೋಪಿ ಎಂದು ಹೆಸರು ಮಾಡಲಾಗಿದೆ.



