ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿದೆ.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಹಾಗೂ ತನಿಖೆಗೆ ನೀಡಿದ್ದ ತಡೆ ತೆರವು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಬೈರತಿ ಬಸವರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಂಧನ ಭೀತಿ ಹಿನ್ನೆಲೆಯಲ್ಲಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
2025ರ ಜುಲೈ 15ರಂದು ರಾತ್ರಿ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸೂರು ಲೇಕ್ ಬಳಿ ರೌಡಿಶೀಟರ್ ಬಿಕ್ಲು ಶಿವನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಿಕ್ಲು ಶಿವನ ತಾಯಿ ನೀಡಿದ್ದ ದೂರಿನಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಸೇರಿ ಹಲವರ ಹೆಸರು ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಎ5 ಆರೋಪಿಯಾಗಿ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ, ಆರೋಪಿಗಳು ನನಗೆ ಪರಿಚಯವೇ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದರು.
ಆದರೆ ಇತ್ತೀಚೆಗೆ ಹೈಕೋರ್ಟ್ ಬಲವಂತದ ಕ್ರಮಕ್ಕೆ ನೀಡಿದ್ದ ತಡೆ ತೆರವುಗೊಳಿಸಿದ ನಂತರ, ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತೆರಳಿದ್ದ ಅವರು, ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸಿಐಡಿ ತಂಡ, ಅವರು ಉಳಿದುಕೊಂಡಿದ್ದ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಸಂಚಾರ ಮಾರ್ಗಗಳು ಹಾಗೂ ರಾಜ್ಯಕ್ಕೆ ಸಂಪರ್ಕಿಸುವ ಟೋಲ್‌ಗೇಟ್‌ಗಳ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದೆ. ತನಿಖೆ ವೇಳೆ ಬೈರತಿ ಬಸವರಾಜ್ ಗೋವಾ ಅಥವಾ ಮಹಾರಾಷ್ಟ್ರಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದ್ದು, ಕೊನೆಯದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಅವರ ಲೈವ್ ಲೊಕೇಶನ್ ಪತ್ತೆಯಾಗಿತ್ತು. ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಸಿಐಡಿ ತನಿಖೆಯಲ್ಲಿ ಆರೋಪಿಗಳೊಂದಿಗೆ ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದ ಮಾಹಿತಿ ಹಾಗೂ ಕೆಲ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವ ಶಂಕೆಯೂ ವ್ಯಕ್ತವಾಗಿದ್ದು, ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆ ಇದೆ.



