ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಂಧನವಾದರೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಬೈರತಿ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದು, ಅದರಲ್ಲಿ ಬೈರತಿ ಬಸವರಾಜ್ ಅವರ ಪಾತ್ರದ ಕುರಿತು ಯಾವುದೇ ಉಲ್ಲೇಖ ಇಲ್ಲ. ದೂರು ಹಾಗೂ ಎಫ್ಐಆರ್ನಲ್ಲಿಯೂ ಅವರ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಲಾಯಿತು.
ಇದೇ ವೇಳೆ, ಎಸ್ಪಿಪಿ ಜಗದೀಶ್ ವಿದೇಶಕ್ಕೆ ತೆರಳಿರುವುದರಿಂದ ವಿಚಾರಣೆ ಮುಂದೂಡಲು ಸರ್ಕಾರಿ ವಕೀಲರು ಮನವಿ ಸಲ್ಲಿಸಿದರು. ಬೈರತಿ ಪರ ವಕೀಲರು, ರಾಜಕೀಯ ಕಾರಣಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ. ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ. ಸಿಐಡಿಗೆ ತನಿಖೆ ವರ್ಗಾವಣೆಗೊಂಡ ಬಳಿಕ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ವಾದ–ಪ್ರತಿವಾದ ಆಲಿಸಿದ ಹೈಕೋರ್ಟ್, ಬೈರತಿ ಬಸವರಾಜ್ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ತನಿಖೆಗೆ ಸಂಪೂರ್ಣ ಸಹಕರಿಸಬೇಕು ಎಂದು ಸೂಚನೆ ನೀಡಿದೆ.
ಸಿಐಡಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಲಾಗಿದೆ. ಇನ್ನೊಂದೆಡೆ, ಇದೇ ಪ್ರಕರಣದಲ್ಲಿ ಎ1 ಜಗದೀಶ್ ಅಲಿಯಾಸ್ ಜಗ್ಗ ಸೇರಿ 18 ಆರೋಪಿಗಳ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.



