ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ಜೈಲನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡು ಜೂಜಾಟ, ಸಿಗರೇಟ್ ಮತ್ತು ಡ್ರಿಂಕ್ಸ್ ಮಾಡಿರುವ shocking ಪ್ರಕರಣ ಹೊರಬಿದ್ದಿದೆ. ಕೈದಿಗಳ ‘ಬಿಂದಾಸ್ ಲೈಫ್’ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಲ್ವರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಕೈದಿಗಳು ಇಸ್ಪೀಟ್ ಆಟ ಆಡುತ್ತಾ, ಸಿಗರೇಟ್ ಸೇದುತ್ತಾ ಮದ್ಯ ಸೇವಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿ ನಾಲ್ವರು ಕೈದಿಗಳು ಜೈಲು ನಿಯಮಗಳನ್ನು ಧಿಕ್ಕರಿಸಿರುವುದು ಸ್ಪಷ್ಟವಾಗಿದೆ.
ವೈರಲ್ ವಿಡಿಯೋ ಪ್ರಕರಣದ ಬೆನ್ನಲ್ಲೇ ಜೈಲು ಅಧೀಕ್ಷಕಿ ಅನೀತಾ ಫರ್ತಾಬಾದ್ ಅವರು ನಾಲ್ವರು ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ತನಿಖೆಗೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿರುವ ಆನಂದ್ ರೆಡ್ಡಿ ಅವರು ಜೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದು, ಜೈಲು ಸಿಬ್ಬಂದಿಯ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ.
ಇನ್ನೂ ಪ್ರಕರಣದ ಗಂಭೀರತೆಯನ್ನು ಗಮನಿಸಿ ಜನವರಿ 3ರಂದು ಡಿಜಿಪಿ ಅಲೋಕ್ ಕುಮಾರ್ ಸ್ವತಃ ಕಲಬುರಗಿ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಈ ಪ್ರಕರಣ ರಾಜ್ಯದ ಜೈಲು ವ್ಯವಸ್ಥೆಯ ಭದ್ರತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.



