ಬಳ್ಳಾರಿ:- ಚಿಕ್ಕಬಳ್ಳಾಪುರ ಬೆನ್ನಲ್ಲೇ ಬಳ್ಳಾರಿಗೂ ಹಕ್ಕಿಜ್ವರ ವಕ್ಕರಿಸಿದ್ದು, ಒಂದೇ ವಾರದಲ್ಲಿ 2 ಸಾವಿರ ಕೋಳಿಗಳು ಸಾವನ್ನಪ್ಪಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟನೆ ಕೊಟ್ಟಿದ್ದು, ಸಂಡೂರ ತಾಲೂಕಿನ ಕುರೇಕುಪ್ಪ ಗ್ರಾಮದ ಬಳಿಯ ಸರ್ಕಾರಿ ಪಾಲ್ಟ್ರಿ ಪಾರ್ಮನಲ್ಲಿನ 2 ಸಾವಿರಕ್ಕೂ ಹೆಚ್ಚು ಕೋಳಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿವೆ.
ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಹೈ ಸೆಕ್ಯೂರಿಟಿ ಅನಿಮಲ್ ದಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದ ಬಳಿಕ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿತು. ಆಂಧ್ರಪ್ರದೇಶ, ತೆಲಂಗಾಣದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದರು.
ಇನ್ನೂ ಹಕ್ಕಿ ಜ್ವರ ದೃಢ ಹಿನ್ನೆಲೆಯಲ್ಲಿ ಬಳ್ಳಾರಿ ಜನರು ಆತಂಕಗೊಂಡಿದ್ದಾರೆ. ಇನ್ನು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿಮೀ ದೂರವನ್ನ ಅಪಾಯಕಾರಿ ವಲಯ ಎಂದು ಗುರುತು ಮಾಡಲಾಗಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸಾಪುರ, ದರೋಜಿ, ದೇವಲಾಪುರ ಗ್ರಾಮಗಳು ಸೇರಿದಂತೆ 10 ಕಿಮೀ ವ್ಯಾಪ್ತಿಯ ಪ್ರದೇಶವನ್ನ ಕಣ್ಣಗಾವಲು ವಲಯ ಎಂದು ಗುರುತು ಮಾಡಲಾಗಿದೆ.