ಪಕ್ಷಿ ಸಮೀಕ್ಷೆ ಕಾರ್ಯ ಯಶಸ್ವಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರಾಜ್ಯದಲ್ಲಿ ಮೊದಲ ಬಾರಿ ಜೀವ ವೈವಿಧ್ಯಗಳ ಪ್ರದೇಶ ಮತ್ತು ಅರಣ್ಯದಲ್ಲಿ ಪಕ್ಷಿ ಗಣತಿ ಕಾರ್ಯ ನಡೆಸಲಾಗಿದ್ದು, ಗದಗ ಜಿಲ್ಲೆಯಿಂದ ಆರಂಭವಾಗಿ 232 ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸುವ ಮೂಲಕ ಗದಗ ಜಿಲ್ಲೆಯ ಪಕ್ಷಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

Advertisement

ರಾಜ್ಯದ ಅರಣ್ಯ ಪ್ರದೇಶದಲ್ಲಿನ ಹುಲಿ-ಆನೆ, ಚಿರತೆಯಂತಹ ವನ್ಯ ಪ್ರಾಣಿಗಳನ್ನು ಕಾಲಕಾಲಕ್ಕೆ ಗಣತಿ ಮಾಡಲಾಗುತ್ತಿದೆ. ಆದರೆ ಇದೀಗ ಗದುಗಿನ ಕಪ್ಪತಗುಡ್ಡದ ಅರಣ್ಯಪ್ರದೇಶ ವ್ಯಾಪ್ತಿಯ ಒಳಗೆ ಮತ್ತು ಗದಗ ಜಿಲ್ಲೆಯ ಕಪ್ಪತಗುಡ್ಡ, ಮಾಗಡಿ, ಶೆಟ್ಟಿಕೆರಿ, ಕುಂದ್ರಳ್ಳಿ ಅರಣ್ಯ, ಕೃಷಿ ಭೂಮಿ ಮತ್ತು ಜಾಗು ಪ್ರದೇಶಗಳಲ್ಲಿನ ಹಕ್ಕಿಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಮಲಯಮಹದೇಶ್ವರ ವನ್ಯ ಜೀವಿ ಧಾಮದಲ್ಲೂ ಸಹ ಪಕ್ಷಿ ಸಮೀಕ್ಷೆ ಫೆಬ್ರವರಿ 1ರಿಂದ ಜರುಗಲಿದೆ.

ಗದುಗಿನಲ್ಲಿ ಜ.20ರಿಂದ 23ರವರೆಗೆ 3 ದಿನ ಸಮೀಕ್ಷೆ ಕಾರ್ಯ ನಡೆದಿದೆ. ಪಕ್ಷಿ ಸಮೀಕ್ಷೆ ಕಾರ್ಯದಲ್ಲಿ ಆಸಕ್ತ ಸಾರ್ವಜನಿಕರು, ಸ್ವಯಂ ಸೇವಕರು, 40 ಪಕ್ಷಿ ವೀಕ್ಷಕರನ್ನೊಳಗೊಂಡ 4-6 ಜನರ 10 ತಂಡಗಳನ್ನು ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಸೇರಿ ಪ್ರತಿ ದಿನ ಬೆಳಗ್ಗಿನ ಜಾವ 5 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ಚಿತ್ರ ಸಹಿತ ದಾಖಲಿಸಲಾಗಿದೆ.

ಪ್ರತಿ ತಂಡಕ್ಕೂ ಸ್ಥಳ ನಿಗದಿಪಡಿಸಿ, ಅಲ್ಲಿ ಬರುವ ಪಕ್ಷಿಗಳ ಪ್ರಭೇದ ದಾಖಲಿಸಿ ಅವುಗಳ ಹಾರಾಟ ಸ್ಥಿತಿಯಲ್ಲಿ ಮತ್ತು ರೂಸ್ಟಿಂಗ್ ಸ್ಥಿತಿಯಲ್ಲಿ ಹಕ್ಕಿಗಳ ಛಾಯಾಚಿತ್ರ ತೆಗೆಯುವುದರ ಮೂಲಕ ದಾಖಲಿಸಲಾಗುತ್ತದೆ. ಬಳಿಕ ಎಲ್ಲ ತಂಡದ ವರದಿಗಳನ್ನು ಕ್ರೋಢೀಕರಿಸಿ ಅಧಿಕಾರಿಗಳು ಮತ್ತು ತಜ್ಞರು ಪರಿಶೀಲಿಸಿ ಅಂತಿಮ ವರದಿ ಸಿದ್ದಪಡಿಸಲಾಗಿದೆ. ಒಟ್ಟು 232 ವಿವಿಧ ಅಪರೂಪದ ಜಾತಿಯ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದ್ದು, ಅದರಲ್ಲಿ 35 ವಲಸೆ ಪಕ್ಷಿಗಳಾಗಿವೆ. ಅವುಗಳಲ್ಲಿ ಗ್ರೇ-ನೆಕ್ಡ್ ಬಂಟಿಂಗ್, ರೆಡ್‌ಸ್ಟಾರ್ಟ್, ಪೆಸಿಫಿಕ್ ಗೋಲ್ಡನ್ ಪ್ಲವರ್, ಗ್ರೇಲ್ಯಾಗ್ ಗೂಸ್, ಬಾರ್-ಹೆಡೆಡ್ ಗೂಸ್, ಅರಣ್ಯ ವ್ಯಾಗ್ಟೇಲ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಟೆಪ್ಪೆ ಈಗಲ್, ಪೆರೆಗ್ರಿನ್ ಫಾಲ್ಕನ್, ಕಪ್ಪು ಬಾಲದ ಗಾಡ್ವಿಟ್, ಬೈಲನ್ಸ್ ಕ್ರೇಕ್, ರಡ್ಡಿ ಶೆಲ್ಡಕ್ ವಿದೇಶಿ ಪಕ್ಷಿಗಳು ಪ್ರಮುಖವಾಗಿವೆ.

ಗದಗ ಪಕ್ಷಿ ಸಮೀಕ್ಷೆ-2025 ಯಶಸ್ವಿ ಟಿಪ್ಪಣಿಯಲ್ಲಿ ಮುಕ್ತಾಯಗೊಂಡಿದೆ. ಇದು ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗದಗ ಅರಣ್ಯ ವಿಭಾಗ ಮತ್ತು ಗದಗ ಅರಣ್ಯ ವಿಭಾಗದ ಸಿಬ್ಬಂದಿ ಮತ್ತು ಅಧಿಕಾರಿಗಳ ತಜ್ಞರ ಮೇಲ್ವಿಚಾರಣೆಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ 35 ವನ್ಯಜೀವಿ ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಅರಣ್ಯ ಸಿಬ್ಬಂದಿ ಸೇರಿ ಒಟ್ಟು 120 ವೀಕ್ಷಕರನ್ನೊಳಗೊಂಡ 15 ತಂಡಗಳ ಸಾಮೂಹಿಕ ಪ್ರಯತ್ನ ಇದಾಗಿದೆ.

ಗದಗ ಜಿಲ್ಲೆ ಪಕ್ಷಿ ಸಮೀಕ್ಷೆ ಕಾರ್ಯದಿಂದ ಪಕ್ಷಿಗಳ ಹೆಚ್ಚಿನ ಸಂಶೋಧನೆ ಮತ್ತು ಸಂರಕ್ಷಣಾ ಯೋಜನೆಗೆ ಮಹತ್ವ ಬರುತ್ತದೆ. ಜಿಲ್ಲೆಯ ಶ್ರೀಮಂತ ಪಕ್ಷಿ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇಲ್ಲಿರುವ ಪರಿಸರ ಸಂಪತ್ತಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಅರಣ್ಯ ಅಧಿಕಾರಿಗಳ ಜೊತೆಯಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಭಾಗವಹಿಸುವಿಕೆಯು ಸಂರಕ್ಷಣೆ ಗುರಿಗಳನ್ನು ಮುನ್ನಡೆಸುವಲ್ಲಿ ಸಹಕಾರಿ ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತದೆ.

– ಸಂತೋಷ ಕುಮಾರ್ ಕೆಂಚಪ್ಪನವರ,

ಡಿಸಿಎಫ್-ಗದಗ.

ಪಕ್ಷಿಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಪಕ್ಷಿಗಳ ಸಮೀಕ್ಷೆ ಮತ್ತು ಸಂಶೋಧನೆಯಿಂದ ನಮ್ಮ ಪರಿಸರದಲ್ಲಿನ ಪಕ್ಷಿ ವೈವಿಧ್ಯತೆ ತಿಳಿಯುತ್ತದೆ. ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ಸಂತತಿ ಕಾಪಾಡಲು ಸಹಕಾರಿಯಾಗುವುದು. ಅಲ್ಲದೇ ಜಿಲ್ಲೆಯ ಜೀವ ವೈವಿಧ್ಯತೆಯ ಮತ್ತು ಪರಿಸರ ಸಂಪತ್ತನ್ನು ಎತ್ತಿ ತೋರಿಸಿ, ಸಂರಕ್ಷಣೆಗೆ ಆದ್ಯತೆ ಬರುತ್ತದೆ.

– ಮಂಜುನಾಥ ನಾಯಕ.

ಜೀವವೈವಿದ್ಯ ವಿಜ್ಞಾನಿ.

 

ಗದಗ ಪಕ್ಷಿ ಸಮೀಕ್ಷೆ-2025ಕ್ಕೆ ಕೊಡುಗೆ ನೀಡಲು ತುಂಬಾ ಸಂತೋಷವಾಗಿದೆ. ಜಿಲ್ಲೆಯ ಕಪ್ಪತಗುಡ್ಡ ವ್ಯಾಪ್ತಿ ಮತ್ತು ಮಾಗಡಿ ಕೆರೆ ರಾಮ್‌ಸರ್ ಸೈಟ್‌ನಲ್ಲಿನ ಶ್ರೀಮಂತ ಜೀವ ವೈವಿಧ್ಯತೆ, ಪಕ್ಷಿಗಳ ಪ್ರಬೇಧಗಳು, ಸಂಖ್ಯೆ ಮತ್ತು ಅವುಗಳ ಆವಾಸಸ್ಥಾನಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಸ್ಥಳೀಯ ಸಮುದಾಯಗಳು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ತೊಡಗಿಸಿಕೊಳ್ಳುವ ಮೂಲಕ ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಮತ್ತು ಸುಸ್ಥಿರ ಜೀವವೈವಿಧ್ಯ ನಿರ್ವಹಣೆಗೆ ಉತ್ತೇಜಿಸುತ್ತದೆ.

– ವಿಜಯಕುಮಾರ.

ಚೇರಮನ್, ವನ್ಯಜೀವಿ ನಿರ್ವಹಣಾ ವಿಭಾಗ,

ಕುವೆಂಪು ವಿವಿ-ಶಿವಮೊಗ್ಗ.


Spread the love

LEAVE A REPLY

Please enter your comment!
Please enter your name here