ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ ಜಿಲ್ಲಾ ಹಾಗೂ ಲಕ್ಷ್ಮೇಶ್ವರ ತಾಲೂಕ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರದಲ್ಲಿ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರು ಮಠದ ಲಿಂ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ಸುತ್ತೂರಿನ ಶ್ರೀಗಳು ತ್ರಿವಿಧ ದಾಸೋಹ ನಡೆಸುವ ಮೂಲಕ ಇಡೀ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು. 400ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟವುದರೊಂದಿಗೆ ಅವರು ಮಾಡಿರುವ ಸಮಾಜ ಸೇವೆ ಅಮೋಘವಾದ್ದು. ಗುರು-ವಿರಕ್ತರು ಒಂದಾಗಬೇಕು ಎಂದು ಸ್ವಾಮೀಜಿ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಲಿಂ. ಶ್ರೀಗಳ ಕುರಿತು ಉಪನ್ಯಾಸ ನೀಡಿದ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಮಠಮಾನ್ಯಗಳು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಡವರಿಗೆ, ದೀನ-ದಲಿತರಿಗೆ, ಹಿಂದುಳಿದವರಿಗಾಗಿ ತ್ರಿವಿಧ ದಾಸೋಹ ನೀಡಿದ ಮೈಸೂರು ಸುತ್ತೂರು ಮಠದ ಲಿಂ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಕೊಡುಗೆ ಅಪಾರವಾಗಿದ್ದು, ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ ಶ್ರೀಗಳ ಕೀರ್ತಿ ಸದಾ ಅಜರಾಮರವಾಗಿದೆ ಎಂದರು.
ಅತಿಥಿಗಳಾಗಿದ್ದ ಬಸವರಾಜ ಬೆಂಡಿಗೇರಿ, ನಿವೃತ್ತ ಶಿಕ್ಷಕಿ ಡಿ.ಎಫ್. ಪಾಟೀಲ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಹಾಗೂ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಾನಂದ ಅಂಗಶೆಟ್ಟಿ, ಮಾಲಾದೇವಿ ದಂಧರಗಿ, ಎಂ.ಕೆ. ಕಳ್ಳಿಮಠ, ಶ್ರೀನಿಧಿ ಸಿಳ್ಳಿನ, ಈರಣ್ಣ ಅಕ್ಕೂರ, ಪೂರ್ಣಾಜಿ ಖರಾಟೆ, ಎನ್.ಆರ್. ಸಾತಪುತೆ, ಗಂಗಾಧರ ಅರಳಿ, ನಿಂಗಪ್ಪ ಗೊರವರ, ಎಸ್.ಬಿ. ಕೊಣ್ಣೂರ, ಡಾ. ಎಸ್.ಎಸ್. ಹೂವಿನ, ಶಂಕರ ಸಿಳ್ಳಿನ ಮತ್ತಿತರರು ಇದ್ದರು.