ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ರಾಜಕೀಯ ಗದ್ದಲಕ್ಕೆ ವೇದಿಕೆಯಾದ ಘಟನೆ ಬೆಳಕಿಗೆ ಬಂದಿದೆ. ಸಚಿವ ಎಚ್ಕೆ ಪಾಟೀಲ್ ಭಾಷಣದ ಮಧ್ಯೆ ಬಿಜೆಪಿ ಎಂಎಲ್ಸಿ ಎಸ್‌ವಿ ಸಂಕನೂರ ವೇದಿಕೆಗೆ ಆಗಮಿಸಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸಂಚಲನ ಮೂಡಿಸಿದೆ.
ಗಣರಾಜ್ಯೋತ್ಸವ ಭಾಷಣದಲ್ಲಿ ಸಚಿವ ಎಚ್ ಕೆ ಪಾಟೀಲ್ ಅವರು ವಿಬಿ ರಾಮ್ ಜಿ ಯೋಜನೆ ಕುರಿತು ಪ್ರಸ್ತಾಪ ಮಾಡುತ್ತಿದ್ದಂತೆಯೇ ಎಂಎಲ್ಸಿ ಸಂಕನೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇದಿಕೆಯ ಸಮೀಪಕ್ಕೆ ಬಂದು ಭಾಷಣವನ್ನು ತಡೆಹಿಡಿಯಲು ಪ್ರಯತ್ನಿಸಿದ್ದು, ಕಾರ್ಯಕ್ರಮ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆದರೆ ಸಚಿವ ಎಚ್ಕೆ ಪಾಟೀಲ್ ಯಾವುದೇ ಪ್ರತಿಕ್ರಿಯೆ ನೀಡದೆ ಭಾಷಣ ಮುಂದುವರೆಸಿದರು. ಇದರಿಂದ ಕೋಪಗೊಂಡ ಸಂಕನೂರ ಅವರು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆದರು.
“ಕಾನೂನು ಸಚಿವರಿಗೆ ಕಾನೂನು ಗೊತ್ತಿಲ್ಲ” – ಸಂಕನೂರ ಕಿಡಿ
ಕಾರ್ಯಕ್ರಮದ ಬಳಿಕ ಮಾತನಾಡಿದ ಎಸ್‌ವಿ ಸಂಕನೂರ, “ಎಚ್ ಕೆ ಪಾಟೀಲ್ ಅವರ ಭಾಷಣವನ್ನು ನಾನು ಖಂಡಿಸುತ್ತೇನೆ. ಕಾನೂನು ಸಚಿವರು ಮೊದಲು ಕಾನೂನು ತಿಳಿದುಕೊಳ್ಳಬೇಕು. ಹಿಂದೆಯೇ 100 ದಿನ ಉದ್ಯೋಗ ಯೋಜನೆ ಇತ್ತು. ನಾವು ಅದನ್ನು 125 ದಿನಗಳಿಗೆ ಹೆಚ್ಚಿಸಿದ್ದೇವೆ. ವಾರಕ್ಕೆ ಕೂಲಿ ಕಾರ್ಮಿಕರಿಗೆ ವೇತನ ಕೊಡುತ್ತಿದ್ದೇವೆ. ಆದರೆ ಸಚಿವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ” ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಈ ರೀತಿಯ ರಾಜಕೀಯ ಗದ್ದಲ ನಡೆದಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



