ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಷಡ್ಯಂತ್ರ: ಡಿ.ಕೆ. ಶಿವಕುಮಾರ್

0
Spread the love

ಬೆಂಗಳೂರು: ಮೂಡಾ ಅಕ್ರಮದ ವಿಚಾರವಾಗಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಬಿಜೆಪಿಯವರು ಹಗರಣಗಳ ಸರದಾರರು. ತಾವೇ ತೋಡಿಕೊಂಡಿರುವ ಬಾವಿಗೆ ಬೀಳಲು ಹೋಗುತ್ತಿದ್ದಾರೆ. ಇದು ಆತ್ಮಹತ್ಯೆ ಪ್ರಯತ್ನವಾಗಿದೆ. ದೇಶದಲ್ಲೇ ಕಾಂಗ್ರೆಸ್ ಆಡಳಿತದಲ್ಲಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಹೀಗಾಗಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಮಾಡಲಿ. ನಾವು ನಮ್ಮದೇ ಆದ ರೀತಿ ಉತ್ತರ ನೀಡುತ್ತೇವೆ” ಎಂದರು.

Advertisement

“ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ತಿಳಿದ ತಕ್ಷಣ, ನಮ್ಮ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಹಲವರನ್ನು ಬಂಧಿಸಿ, ಅಕ್ರಮವಾಗಿ ಸಾಗಾಟ ಮಾಡಿದ್ದ ಹಣವನ್ನು ವಾಪಸ್ ಪಡೆದಿದ್ದೇವೆ. ಪ್ರತಿಪಕ್ಷಗಳು ಪ್ರಚಾರ ಪಡೆಯಲು ಬೇರೆ ತನಿಖಾ ಸಂಸ್ಥೆಗಳನ್ನು ಕರೆತಂದು ನಮ್ಮವರಿಗೆ ಕಿರುಕುಳ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕಾರ ಅವರ ಪ್ರಯತ್ನ ಅವರು ಮಾಡಲಿ” ಎಂದು ತಿಳಿಸಿದರು.

“ಈ ವಿಚಾರವಾಗಿ ಚರ್ಚೆ ಮಾಡಲು ಸದನದಲ್ಲಿ ಅವಕಾಶ ನೀಡಿದೆವು. ಆದರೆ ಅವರು ಮುಖ್ಯಮಂತ್ರಿಗಳಿಗೆ ಉತ್ತರ ನೀಡಲು ಅವಕಾಶವನ್ನೇ ನೀಡಲಿಲ್ಲ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸಿ.ಟಿ ರವಿ ಸೇರಿದಂತೆ ಅವರ ಪಕ್ಷದ ನಾಯಕರು ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಂಡಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಬಿಜೆಪಿಯ ಆಡಳಿತ ಅವಧಿಯಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡಿದರು. ಅವರ ಅಕ್ರಮಗಳ ಬಗ್ಗೆ ಸಿಎಜಿ ವರದಿಗಳಿವೆ. ಇವುಗಳ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ” ಎಂದು ತಿಳಿಸಿದರು.

“ಅದೇ ರೀತಿ ಮುಡಾ ವಿಚಾರದಲ್ಲೂ ಅವರು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂಬ ಕಾರಣಕ್ಕೆ ಇಬ್ಬರೂ ಒಂದಾಗಿ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಅವರ ಕಾಲದಲ್ಲಿ ಯಾರು ಅಕ್ರಮವಾಗಿ ಎಷ್ಟು ನಿವೇಶನಗಳನ್ನು ಪಡೆದಿದ್ದಾರೆ ಎಂಬುದನ್ನು ನಾವು ಬಹಿರಂಗಪಡಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

“ಮುಖ್ಯಮಂತ್ರಿಗಳ ಕುಟುಂಬದ ಜಮೀನನ್ನು ನೋಟಿಫಿಕೇಶನ್ ಮಾಡದೇ ಮೂಡಾದವರು ಕಬಳಿಸಿದ್ದರು. ಅದಕ್ಕೆ ಪರಿಹಾರವಾಗಿ ಈ ನಿವೇಶನಗಳನ್ನು ನೀಡಲಾಗಿದೆ. ನಿಯಮಾವಳಿ ಪ್ರಕಾರ ನೋಟಿಫಿಕೇಶನ್ ಮಾಡದೇ ಭೂಮಿಯನ್ನು ಬಳಸಿಕೊಂಡರೆ ಪರಿಹಾರ ನೀಡಲು ಅವಕಾಶವಿದೆ. ಅದೇ ರೀತಿ ಇಲ್ಲೂ ಆಗಿದೆ. ಕೆಲವು ಕಡೆ 50:50 ಅನುಪಾತದಲ್ಲಿ ನೀಡಿದರೆ, ಮತ್ತೆ ಕೆಲವು ಕಡೆ ಶೇ.100 ರಷ್ಟು ಮತ್ತೆ ಕೆಲವು ಕಡೆ ಶೇ.30 ರಷ್ಟು ನೀಡುತ್ತಾರೆ. ಮುಖ್ಯಮಂತ್ರಿಗಳ ಕುಟುಂಬದವರು ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಕೇಳಿಲ್ಲ. ಮುಡಾ ಅಧಿಕಾರಿಗಳು ಕೊಟ್ಟ ನಿವೇಶನವನ್ನು ಪಡೆದಿದ್ದಾರೆ” ಎಂದು ವಿವರಿಸಿದರು.


Spread the love

LEAVE A REPLY

Please enter your comment!
Please enter your name here