ಬೆಂಗಳೂರು: ಹರಿಯಾಣದಲ್ಲಿ ಹಗರಣದಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿಗೆ ಆರಂಭಿಕ ಹಿನ್ನಡೆಯಾದರೂ ಬಳಿಕ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಫಲಿತಾಂಶ ಇದೆ ನೋಡೋಣ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳಲ್ಲೇ ಮುಳುಗೆದ್ದಿದೆ, ಆದ್ರೆ ಹರಿಯಾಣದಲ್ಲಿ ಹಗರಣದಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲ. ಇನ್ನೂ 12 ಗಂಟೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು.
ಫಲಿತಾಂಶ ಏನೇ ಬಂದರೂ ಚುನಾವಣಾ ಆಯೋಗ ದೂರೋದು, ಇವಿಎಂ ದೂರೋದು, ಜನ ಸರಿಯಿಲ್ಲ ಅಂತ ಇದುವರೆಗೆ ನಾವು ಮಾಡಿಲ್ಲ. ಕಾಂಗ್ರೆಸ್‌ನವರು ಅವರ ಪರ ಬಂದರೆ ಜನಾದೇಶ. ಇಲ್ಲದಿದ್ದರೇ ಇವಿಎಂ ದೋಷ. ಜನ ಸರಿಯಿಲ್ಲ ಅಂತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತ ಚಲಾವಣೆ ಆಗಿದೆ. ಆ ಮೂಲಕ ಅಲ್ಲಿನ ಜನ ನಾವು ಭಾರತದ ಜೊತೆಗೆ, ಪ್ರಜಾಪ್ರಭುತ್ವದ ಜೊತೆ ಇದ್ದೇವೆ ಎಂದು ತೋರಿಸಿದ್ದಾರೆ. ಹಾಗಾಗಿಯೇ ಇದು ಪ್ರಜಾಪ್ರಭುತ್ವದ ಜಯ. ಜನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಭಯೋತ್ಪಾದನೆಯ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಭಾರತದ ಜಯ ಎಂದು ಹೇಳಿದರು.