ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರ ಬಿಜೆಪಿ ಸರ್ಕಾರವು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಪಂಚಕ್ಷೇತ್ರವನ್ನು ಅಭಿವೃದ್ಧಿಪಡಿಸಿತು. ವಾಜಪೇಯಿ ಅವರ ಶಿಫಾರಸ್ಸಿನ ಮೇರೆಗೆ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಾಯಿತು. ಅಂಬೇಡ್ಕರ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಚುನಾವಣಾ ಏಜೆಂಟ್ ಆಗಿದ್ದವರು ಆರ್‌ಎಸ್‌ಎಸ್ ವ್ಯಕ್ತಿ. ಹೀಗೆ ದಲಿತ, ಹಿಂದುಳಿದ ಸಮುದಾಯಕ್ಕೆ ಬಿಜೆಪಿ ಬೆಂಬಲ ನೀಡುತ್ತಲೇ ಬಂದಿದೆ. ಅಹಿಂದ ಎಂದರೆ ಕೇವಲ ಕಾಂಗ್ರೆಸ್ ಪಕ್ಷ ಅಲ್ಲ. ಬಿಜೆಪಿ ಪಕ್ಷಕ್ಕೆ ಅಹಿಂದ ವರ್ಗದ ಅಧಿಕ ಬೆಂಬಲವಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್ ಆಗಿ ಕಳೆದ 70 ವರ್ಷಗಳಿಂದಲೂ ಬಳಸುತ್ತಿದೆ. ಕಾಂಗ್ರೆಸ್ ಪಕ್ಷ ಸುಡುವ ಮನೆ ಇದ್ದಂತೆ. ಆ ಮನೆಯಲ್ಲಿ ಇದ್ದರೆ ಸುಟ್ಟು ಬೂದಿ ಆಗುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದರಲ್ಲದೆ, ನಕಲಿ ವಿಡಿಯೋಗಳನ್ನು ಹರಿಬಿಟ್ಟು ಬಿಜೆಪಿ ಅಂಬೇಡ್ಕರ್ ವಿರೋಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಆದರ್ಶಗಳನ್ನು ಬಿಜೆಪಿ ಪಕ್ಷ ಅಳವಡಿಸಿಕೊಳ್ಳುತ್ತ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತಹವುಗಳಾಗಿವೆ. ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಶಿಶುನಾಳ ಷರೀಫರ ನಾಡಿನಿಂದ ಬಂದವರು. ಅವರ ಆದರ್ಶಗಳನ್ನು ಬೊಮ್ಮಾಯಿ ಅವರಲ್ಲಿ ಕಾಣುತ್ತೇವೆ ಎಂದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ದಲಿತ ಮತ್ತು ಹಿಂದುಳಿದ ವರ್ಗಗಳನ್ನು ತಮ್ಮ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಲೇ ಬಂದಿದೆ. ಇದರಿಂದ ದಲಿತ ಸಮುದಾಯಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಬಿಜೆಪಿ ಪಕ್ಷದಿಂದಲೇ ದಲಿತ, ಹಿಂದುಗಳ ವರ್ಗಗಳ ಅಭಿವೃದ್ಧಿ ಸಾಧ್ಯ ಎಂದರು.
ಪಕ್ಷದ ಪ್ರಮುಖರಾದ ಅನಿಲ ಅಬ್ಬಿಗೇರಿ, ಕಾಂತಿಲಾಲ್ ಬನ್ಸಾಲಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಮೇ 3 ಮತ್ತು 4ರಂದು ಎರಡು ದಿನಗಳ ಕಾಲ ನಗರದಲ್ಲಿ ಮುಖಂಡ ಗೋವಿಂದ ಕಾರಜೋಳ ಹಾಗೂ ಚಲವಾದಿ ನಾರಾಯಣರ ನೇತೃತ್ವದಲ್ಲಿ ಬೆಟಗೇರಿಯಲ್ಲಿ ಸಮಾವೇಶ, ದಲಿತ ಸಮುದಾಯಗಳೊಂದಿಗೆ ಚರ್ಚೆ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಅನಿಲ ಮೆಣಸಿನಕಾಯಿ ತಿಳಿಸಿದರು.


