ಹುಬ್ಬಳ್ಳಿ: ಅಧಿಕೃತವಾಗಿ 3 ಕ್ಷೇತ್ರಗಳ ಅಖಾಡಕ್ಕೆ ಅಭ್ಯರ್ಥಿಗಳ ರಂಗಪ್ರವೇಶ ಆಗಿದ್ದು, ಉಪ ಚುನಾವಣೆ ರಂಗು ಪಡೆದಿದೆ. ಇದರ ಬೆನ್ನಲ್ಲೇ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಎಂಟು ಜನ ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿ, ಸುಮ್ಮನೇ ಈ ರೀತಿ ಸುಳ್ಳು ಹೇಳಿಕೆ ನೀಡೋದು ಸರಿಯಲ್ಲ. ಅವರು ನಮ್ಮ ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಈ ರೀತಿ ಮಾತನಾಡುತ್ತಿದ್ದಾರೆ.
ಯಾವ್ಯಾವ ಶಾಸಕರು ಹೋಗುತ್ತಾರೆ ಅವರ ಹೆಸರು ಹೇಳಬೇಕಲ್ವಾ. ಎಸ್.ಟಿ.ಸೋಮಶೇಖರ್ ಅದನ್ನ ಸ್ಪಷ್ಟಪಡಿಸಲಿ, ನಮ್ಮ ಮೇಲೆ ಅಂತಹ ಅಭಿಪ್ರಾಯಗಳು ಇದ್ದರೆ ನಾವು ಯಾಕೆ ನಾಮಪತ್ರ ಸಲ್ಲಿಸುವುದಕ್ಕೆ ಬರುತ್ತಿದ್ದೆವು ಎಂದರು. ಬಿಜೆಪಿ ಕುಟುಂಬ ರಾಜಕಾರಣ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಯಾವುದೇ ಕುಟುಂಬ ರಾಜಕಾರಣ ಪ್ರಶ್ನೆಯೇ ಇಲ್ಲ.
ಬೊಮ್ಮಾಯಿಯವರು ಅವರ ಮಗನಿಗೆ ಟಿಕೆಟ್ ಬೇಡ ಎಂದಿದ್ದರು. ರಾಷ್ಟ್ರೀಯ ನಾಯಕರೇ ನಿರ್ಧಾರ ಮಾಡಿದಾಗ ಬೇಡ ಎನ್ನಲು ಸಾಧ್ಯವಿಲ್ಲ. ಹಿರಿಯ ನಾಯಕರ ನಿರ್ಧಾರವನ್ನ ತಿರಸ್ಕಾರ ಮಾಡುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರ ನಿರ್ಧಾರದ ಮೇಲೆ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ ಎಂದು ತಿಳಿಸಿದರು.



