ವಿಜಯಸಾಕ್ಷಿ ಸುದ್ದಿ, ನರಗುಂದ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಮುಂದುವರೆದಿದ್ದು ಬಿಜೆಪಿ ಸರ್ಕಾರ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ನೂರಾರು ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದರಿಂದ ಕಾಮಗಾರಿಗೆ ಈಗಾಗಲೇ ಭೂಮಿಪೂಜೆ ನೆರವೇರಿಸಿದ್ದೇವೆ. ಈ ಮಹತ್ವದ ಕಾಮಗಾರಿ ಮುಗಿಸುವ ಜವಾಬ್ದಾರಿಯನ್ನು ಬಿಜೆಪಿ ಪಕ್ಷದಿಂದ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ನರಗುಂದ ರೈತ ಬಂಡಾಯ ನಡೆಯಿತು. ರೈತರು ನಡೆಸಿದ 40 ದಿನಗಳ ನಿರಂತರ ಹೋರಾಟಕ್ಕೆ ಅಂದಿನ ತಹಸೀಲ್ದಾರರು ಉದ್ಧಟತನ, ಅಗೌರವ ತೋರಿದ್ದರಿಂದ ಅಮಾಯಕ ರೈತರು, ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಹುತಾತ್ಮ ರೈತರ ಸ್ಮರಣಾರ್ಥ ಸಚಿವ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದ್ದಾರೆ. ಇದಕ್ಕೆ ಭೂದಾನ ಮಾಡಿದ ದೇಸಾಯಿಗೌಡ ಪಾಟೀಲ, ಸಲೀಂಸಾಬ ಮೇಗಲಮನಿ ಅವರ ಕಾರ್ಯ ಸ್ಮರಣೀಯ. ಆದರೆ, ಈ ಹೋರಾಟಕ್ಕೆ ಸುದೀರ್ಘ 45 ವರ್ಷ ಗತಿಸಿದ ಬಳಿಕ ಸ್ಮಾರಕ ನಿರ್ಮಿಸುತ್ತಿರುವುದು ವೈಯಕ್ತಿಕವಾಗಿ ನನಗೆ ನೋವು ತರಿಸಿದೆ ಎಂದರು.
ಈ ಹಿಂದೆ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ 69 ದಿನಗಳ ನಿರಂತರ ಪ್ರತಿಭಟನೆ, ಪಾದಯಾತ್ರೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿ.ಎಸ್. ಯಡಿಯೂರಪ್ಪನವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದರಿಂದ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದೇವೆ. ನರಗುಂದ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವಿವಿಧ ಕಾಮಗಾರಿಗಳನ್ನು ಮಾಡಿದ್ದೇನೆ. ಆದರೆ, ಇದುವರೆಗೆ ಕಳಸಾ ಬಂಡೂರಿ ನೀರು ಬಾರದಿರುವ ನೋವು ಕೂಡ ನನಗಿದೆ. ಈ ಯೋಜನೆ ಏನಾದರೂ ಸ್ವಲ್ಪ ಪ್ರಗತಿ ಕಂಡಿದ್ದರೆ ಅದಕ್ಕೆ ಬಿಜೆಪಿಯೇ ಕಾರಣ ಎಂದರು.
ಕೇಂದ್ರ ಹಾಗೂ ಗೋವಾದವರ ಮನವೊಲಿಸಿ ಯೋಜನೆ ಮುಗಿಸುವ ಜವಾಬ್ದಾರಿಯೂ ಬಿಜೆಪಿ ವಹಿಸಲಿದೆ. ಅಪರ ಕೃಷ್ಣಾ ಮೇಲ್ದಂಡೆ ಹಾಗೂ ಕಳಸಾ ಬಂಡೂರಿ ಯೋಜನೆ ಸೇರಿದಂತೆ ರಾಜ್ಯದ ಪ್ರತಿಯೊಂದು ಯೋಜನೆಗಳ ಕುರಿತು ಕಾಂಗ್ರೆಸ್‌ನವರು ಮನವಿ ಮಾಡಿಕೊಂಡಿಲ್ಲ. ರಾಜ್ಯದ ರೈತರ ಹಿತದೃಷ್ಟಿಯಿಂದ ಡಿ.ಕೆ. ಶಿವಕುಮಾರ ಸೇರಿ ರಾಜ್ಯ ಸರ್ಕಾರದ ಪ್ರತಿಯೊಬ್ಬರೂ ಕಾನೂನಾತ್ಮಕ ಮನವಿ ಮಾಡಿದರೆ ಕೇಂದ್ರದಿಂದ ಎಲ್ಲ ಯೋಜನೆಗಳಿಗೂ ನ್ಯಾಯ ದೊರೆಯುತ್ತದೆ ಎಂದರು.
ಕೂಡಲಸಂಗಮ ಶ್ರೀಬಸವಜಯ ಮೃತ್ಯುಂಜಯ ಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಬಿನ್ನಾಭಿಪ್ರಾಯ ಬಗೆಹರಿಯಲಿ ಎಂಬುದು ನಾಡಿನ ಪಂಚಮಸಾಲಿ ಸಮಾಜದವರ ಆಶಯ. ಶ್ರೀಗಳಿಗೆ ಹಿಂಸೆ ಆಗಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ, ನಿನ್ನೆಯ ದಿನ ಗುಣಮುಖರಾಗಿ ಬಂದಿದ್ದಾರೆ. ನಮ್ಮ ಸಮಾಜದ ಎಲ್ಲ ಹಿರಿಯರು, ಶಾಸಕ, ಸಚಿವರು, ಸಂಸದರು, ವಿಧಾನಪರಿಷತ್ತಿನ ಸದಸ್ಯರು ಕೂಡಿ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಂದಾನ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನಮಾಡುತ್ತೇವೆ.
ಬಿಜೆಪಿ ಸರ್ಕಾರದ ವಿರುದ್ಧ ಕೂಡಲಸಂಗಮ ಶ್ರೀಗಳು ಪ್ರತಿಭಟನೆ ಮಾಡುವಾಗ ವಿಜಯಾನಂದ ಕಾಶಪ್ಪನವರ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 2ಎ ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಕಾಶಪ್ಪನವರ ಈಗಲಾದರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪಾಟೀಲ, ಎಂ.ಎಚ್. ತಿಮ್ಮನಗೌಡ್ರ, ಬಿ.ಬಿ. ಐನಾಪೂರ, ಉಮೇಶಗೌಡ ಪಾಟೀಲ, ಎ.ಎಂ. ಹುಡೇದ, ನಿಂಗಣ್ಣ ಗಾಡಿ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಎಸ್.ಬಿ. ಸುಂಕದ, ನಾಗರಾಜ ನೆಗಳೂರ, ಹಸನ ನವದಿ, ಗುರಪ್ಪ ಆದೆಪ್ಪನವರ ಇತರರಿದ್ದರು.
ಚಪ್ಪಾಳೆ ಒಂದೇ ಕೈಯಿಂದ ಆಗುವುದಿಲ್ಲ. ಸಮಸ್ಯೆ ಬಗೆಹರಿಯಬೇಕಾದರೆ ಶ್ರೀಗಳು ಹಾಗೂ ಕಾಶಪ್ಪನವರ ಅವರು ತಲಾ ಎರಡು ಹೆಜ್ಜೆ ಹಿಂದೆ ಸರಿಯಬೇಕಾಗುತ್ತದೆ. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದಂತಾಗುತ್ತದೆ. ಆದರೆ, ಇದು ಸಾಧ್ಯವಾಗದಿದ್ದರೆ ಶ್ರೀಗಳಿಗೆ ಅನುಕೂಲವಾಗುವಂತೆ ಎಲ್ಲರೂ ಅಪೇಕ್ಷೆಪಟ್ಟ ಗ್ರಾಮ, ನಗರದಲ್ಲಿ ಮತ್ತೊಂದು ಶಾಖಾಪೀಠವನ್ನು ಮಾಡಿ ಶ್ರೀಗಳಿಗೆ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.