ಬೆಂಗಳೂರು:- ಸರ್ಕಾರ ಬುಡಮೇಲು ಮಾಡಲು ರಾಜ್ಯ ಬಿಜೆಪಿ ನಾಯಕರು ಅಮಿತ್ ಶಾ ಸಲಹೆ ಪಡೆದಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಟೀಕೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಸರಿಯಿಲ್ಲ ಎಂದು ಹೇಳಿ ಬಿಜೆಪಿ ಚರಂಡಿಯಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಿದೆ. ಹಿಂದೂಗಳ ಲ್ಯಾಬೊರೇಟರಿ ಆಗಿದ್ದಂತಹ ದಕ್ಷಿಣ ಕನ್ನಡದಲ್ಲಿ ಶಾಂತಿ ನೆಲಸಲು ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರ ಕಾರಣ. ಈಗ ಅಲ್ಲಿ ಶಾಂತಿ ನೆಲೆಸಿರುವುದರಿಂದ ಬಿಜೆಪಿಗೆ ರೋಟಿ, ಕಪಡಾ, ಮಕಾನ್ ಬಂದ್ ಆಗಿದೆ. ಅದನ್ನು ಪುನರ್ ಸ್ಥಾಪನೆ ಮಾಡಲು ಬೇರೆ ಜಿಲ್ಲೆಯಲ್ಲಿ ಹೋಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾಲೆಳೆದರು.
ಧರ್ಮಸ್ಥಳದಲ್ಲಿ ಆಗುತ್ತಿರುವ ಜಗಳ ಧರ್ಮಸ್ಥಳದ ವಿಚಾರವಾಗಿ ಅಲ್ಲ. ಬಿಜೆಪಿಯಲ್ಲಿರುವ ಸ್ವಯಂ ಸೇವಕ ಸಂಘದ ಅಗ್ರಗಣ್ಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿ.ಎಲ್ ಸಂತೋಷ್ ನಡುವಿನ ಜಗಳ ಧರ್ಮಸ್ಥಳವನ್ನ ಹಾಳು ಮಾಡುತ್ತಿದೆ. ಅಲ್ಲಿ ಶಾಂತಿ ನೆಲೆಸಿರುವುದು ಇವರಿಗೆ ಹಿಡಿಸುತ್ತಿಲ್ಲ. ಏನಾದರೂ ಮಾಡಿ ಕೆದಕಲು ನೋಡುತ್ತಿದ್ದಾರೆ, ಅದು ನಡೆಯಲ್ಲ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ. ಸಂಘ ಪರಿವಾರದ ನಡುವಿನ ಜಗಳದಿಂದಲೇ ಧರ್ಮಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಆರೋಪಿಸಿದರು.