ಬೆಂಗಳೂರು: ಅಬಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಆಗಿರುವುದರಿಂದ 50% ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ. ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ.
ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಅಶೋಕ್ ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಏರಿಕೆಯಾಗಿದೆ. ಆಸ್ಪತ್ರೆಗಳೇ ವಸೂಲಿ ಕೇಂದ್ರಗಳಾಗಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಕುರಿತು ವರದಿ ತರಿಸಿಕೊಳ್ಳುತ್ತೇನೆ ಎಂದು ಅಶೋಕ್ ಹೇಳಿದರು.