ಕೊಪ್ಪಳ: ಮಾರಕಾಸ್ತ್ರಗಳಿಂದ ಕೊಚ್ಚಿ ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿನಗರದಲ್ಲಿ ತಡರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ್(31) ಕೊಲೆಯಾದ ದುರ್ದೈವಿಯಾಗಿದ್ದು,
ವೆಂಕಟೇಶ್ ಸ್ನೇಹಿತರೊಟ್ಟಿಗೆ ಊಟ ಮಾಡಿ ದೇವಿಕ್ಯಾಂಪ್ನಿಂದ ಗಂಗಾವತಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ದುಷ್ಕರ್ಮಿಗಳು ಅವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಹೀಗೆ ಬಂದವರು ಅವರ ಬೈಕ್ಗೆ ಗುದ್ದಿದ್ದಾರೆ. ವೆಂಕಟೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ವೆಂಕಟೇಶ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ದುರಂತ ಘಟನೆ ಕೊಪ್ಪಳ ರಸ್ತೆಯ ಲೀಲಾವತಿ ಎಲುಬು ಕೀಲು ಆಸ್ಪತ್ರೆಯ ಮುಂದೆಯೇ ನಡೆದಿದೆ. ಗಂಗಾವತಿನಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಘಟನೆ ನಡೆದ ಸ್ಥಳಕ್ಕೆ ಬಂದ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ.


