ಬೆಂಗಳೂರು: ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯ ವೇಳೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಎರಡನೇ ದಿನ ವಾಶ್ ರೂಂಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಫೋಟೋ ತೆಗೆದಿದ್ದಾನೆ ಎನ್ನಲಾಗಿದೆ. ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವಿಡಿಯೋವನ್ನು ನೇರವಾಗಿ ಸಂತ್ರಸ್ತೆಗೆ ಕಳುಹಿಸಿ ಹಣದ ಬೇಡಿಕೆ ಇಡುವುದು ಕಾಣಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿ ‘Swan.3704722’ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಯ ಆಪ್ತ ಸ್ನೇಹಿತೆಗೆ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.
‘ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ನೀಡಬೇಕು’ ಎಂದು ಆರೋಪಿಯು ಬೆದರಿಕೆ ಹಾಕಿದ್ದು, ವೀಡಿಯೋ ಕಾಲ್ ಮೂಲಕವೂ ಹಲವು ಬಾರಿ ಹಣದ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಸದ್ಯ ಆರೋಪಿಯು ಕಳುಹಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಕ್ಷಿಯಾಗಿ ನೀಡಿ ನಟಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.



