ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ದೇಶದಲ್ಲಿ ಮೋದಿಯವರ ಪ್ರಭಾವ ಹೆಚ್ಚಾಗಿದ್ದು, 400ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಶಾಸಕ ಕಳಕಪ್ಪ ಬಂಡಿಯವರ ನಿವಾಸದ ಆವರಣದಲ್ಲಿ ಸೋಮವಾರ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಡವರ ಬಾಳಿಗೆ ಬೆಳಕಾಗಲು ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಮನ್ವಂತರಕ್ಕಾಗಿ ನನಗೆ ಆರ್ಶೀವಾದ ಮಾಡಿ ಎಂದ ಅವರು, ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲ. ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದ್ದು, ದೇಶದ ಸಮಗ್ರ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಹೊಸ ಕಾಮಗಾರಿಗಳು ನಡೆಯದ್ದರಿಂದ ನರೇಗಾ ಕಾಮಗಾರಿಗಳ ಮುಂದೆ ಜನಪ್ರತಿನಿಧಿಗಳು ನಿಲ್ಲುವ ದುಃಸ್ಥಿತಿ ಬಂದಿದೆ. ಬೊಮ್ಮಾಯಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುತ್ತೇವೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಳಸಾ ಬಂಡೂರಿ ಯೋಜನೆ ಒಂದು ಹಂತಕ್ಕೆ ಬಂದು ನಿಲ್ಲಲು ಬೊಮ್ಮಾಯಿ ಅವರು ಪ್ರಮುಖರು. ಹೀಗಾಗಿ ಅಭಿವೃದ್ಧಿಪರ ಆಡಳಿತಕ್ಕೆ ಆದ್ಯತೆ ನೀಡುವ ಬೊಮ್ಮಾಯಿ ಅವರನ್ನು ಗೆಲ್ಲಿಸಿ ಎಂದರು.
ಮುಖಂಡ ಮುತ್ತಣ್ಣ ಕಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಬಿ.ಎಂ. ಸಜ್ಜನರ, ಆರ್.ಕೆ. ಚವ್ಹಾಣ, ಇಂದಿರಾ ತೇಲಿ ಮಾತನಾಡಿದರು. ಎಂ.ಎಸ್. ಕರಿಗೌಡ್ರ, ದತ್ತು ಬಾಕಳೆ, ಅಶೋಕ ನವಲಗುಂದ, ಉಮೇಶ ಮಲ್ಲಾಪೂರ, ನಿಂಗಪ್ಪ ಕೆಂಗಾರ, ಮುತ್ತಣ್ಣ ಚಟ್ಟೇರ, ರಾಜೇಂದ್ರ ಘೋರ್ಪಡೆ, ಬಸವರಾಜ ಬಂಕದ, ಬಾಳು ಗೌಡರ, ಭವಾನಿ ಬಾಕಳೆ ಸೇರಿ ಪುರಸಭೆ ಸದಸ್ಯರು, ವಿವಿಧ ಮೋರ್ಚಾದ ಪದಾಧಿಕಾರಿಗಳು ಇದ್ದರು.