ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯಲ್ಲಿರುವ 85ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳಿಗೆ ಕೊಪ್ಪಳದ ಪಾನಘಂಟಿ ಪೌಂಡೇಶನ್ ಭಾಗ್ಯನಗರ ಹಾಗೂ ವಾಸವಿ ಕ್ಲಬ್ ಭಾಗ್ಯನಗರ ವತಿಯಿಂದ ಸ್ವೆಟರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾರದಾ ಪಾನಘಂಟಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನಿಜವಾದ ದೇವರು ಎಂದರೆ ಅಂಧ ಮಕ್ಕಳು. ಕಣ್ಣಿಲ್ಲದಿದ್ದರೂ ನವ ಸಮಾಜದ ಕನಸು ಕಟ್ಟಿಕೊಂಡವರು. ಯಾವುದೇ ತಾತ್ಸಾರ-ಅಸೂಯೆಯ ಮನೋಭಾವ ಇಲ್ಲದೆ ತಮ್ಮ ಪ್ರತಿಭೆಯ ಮೂಲಕವೇ ಬೆಳಕಾದವರು. ಇಂತವರಿಗೆ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಕೈಲಾದಮಟ್ಟಿಗೆ ಸಹಾಯ ಮಾಡಲು ಅವಕಾಶ ಒದಗಿದ್ದು ನಮ್ಮ ಪುಣ್ಯ ಎಂದರು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಂಧ ಮಕ್ಕಳ ಪಾಲಿನ ಬೆಳಕಾದ ತುಳಸಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಜ್ಞಾನಸಿಂಧು ಅಂಧ ವಿದ್ಯಾರ್ಥಿಗಳು ಯೋಗ, ಸಂಗೀತ ಮತ್ತು ಮಲ್ಲಗಂಬ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮನಗೆದ್ದರು. ವಿಶೇಷ ಕೌಶಲ್ಯ ಹಾಗೂ ಪ್ರತಿಭೆಯ ಮೂಲಕ ಗುರುತಿಸಿಕೊಂಡ ಅಂಧ ವಿದ್ಯಾರ್ಥಿಗಳು ಬ್ರೈಲ್ ಲಿಪಿ ವಿದ್ಯಾಭ್ಯಾಸ ಹಾಗೂ ದಿನನಿತ್ಯದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಸವಿ ಕ್ಲಬ್‌ನ ಕಾರ್ಯದರ್ಶಿ ಲಕ್ಷ್ಮೀ ಪಾನಘಂಟಿ, ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ಸಾಹಿತಿ ಡಾ. ಬಿ.ಎನ್. ಹೊರಪೇಟಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು.