ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಘಟಕದ ವತಿಯಿಂದ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಪ್ರಗತಿಯಿಂದ ಹೃದಯ ಸೇರಿ ಮನುಷ್ಯನಿಗೆ ಕೃತಕವಾದ ಅಂಗಗಳನ್ನು ಅಳವಡಿಸಬಹುದಾಗಿದೆ. ಆದರೆ ರಕ್ತವನ್ನು ಮಾತ್ರ ಕೃತಕವಾಗಿ ಸೃಷ್ಟಿಸಲಾಗದು. ಇದೀಗ ರಕ್ತದ ಅವಶ್ಯಕತೆ ಸಾಕಷ್ಟಿದ್ದು, ಈ ಬಗ್ಗೆ ಜಾಗೃತಿಯ ಜತೆಗೆ ಸ್ವಯಂ ರಕ್ತದಾನ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕರವೇ ಸ್ವಾಭಿಮಾನಿ ಸೇನೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೆರೆಯ ಸವಣೂರ, ಶಿಗ್ಗಾಂವ, ಕುಂದಗೋಳ, ಶಿರಹಟ್ಟಿ ತಾಲೂಕಿನಿಂದ ನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಪಘಾತ, ಹೆರಿಗೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಹುಬ್ಬಳ್ಳಿ, ಗದಗಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಇದೀಗ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿಯೇ ರಕ್ತ ಸಂಗ್ರಹಣಾ ಘಟಕ ಪ್ರಾರಂಭಿಸಿದೆ. ಅದಕ್ಕಾಗಿ ರಕ್ತದಾನದ ಶಿಬಿರಗಳನ್ನು ನಡೆಸುವ ನಿಟ್ಟಿನಲ್ಲಿ ಕರವೇ ಸ್ವಾಭಿಮಾನಿ ಸೇನೆ ಸದಾ ಬದ್ಧವಾಗಿದೆ ಎಂದರು.
ಮುಖಂಡರಾದ ಪದ್ಮರಾಜ ಪಾಟೀಲ, ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ತಾಲೂಕಾಧ್ಯಕ್ಷ ನಾಗೇಶ್ ಅಮರಾಪುರ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಮುಂಡವಾಡ, ಶಿರಹಟ್ಟಿ ತಾಲೂಕಾಧ್ಯಕ್ಷ ವೀರೇಶ ಪಸಾರದ, ಕೈಸರ್ ಮಹ್ಮದಲಿ, ಲುಕಮಾನ ಬೆಟಗೇರಿ, ಶರಣಪ್ಪ ಬಸಾಪುರ, ಫಕ್ಕೀರಗೌಡ ಪಾಟೀಲ, ದೇವೇಂದ್ರ ಶಿಂದೆ, ಮೈನು ಮನಿಯಾರ, ಅಶ್ಫಾಕ್ ಬಾಗೋಡಿ, ಸೋಹೈಲ್ ನದಾಫ್ ಮುಂತಾದವರಿದ್ದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರ ತಂಡದ ಡಾ. ವೆಂಕಟೇಶ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಒಟ್ಟು 30ಕ್ಕೂ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ದಾನಿಗಳಿಗೆ ಜಿಮ್ ನಿಂದ ಪ್ರಮಾಣಪತ್ರ ನೀಡಲಾಯಿತು.