ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಸಂದರ್ಭದಲ್ಲಿ ರೋಗಿಯ ಜೀವ ಉಳಿಯಲು ರಕ್ತದ ಅವಶ್ಯಕತೆ ಇದ್ದೇ ಇದೆ. ಹೀಗೆ ರಕ್ತವನ್ನು ಒದಗಿಸುವಲ್ಲಿ ಬ್ಲಡ್ ಬ್ಯಾಂಕ್ಗಳು ಮಹತ್ತರ ಸೇವೆ ಒದಗಿಸುತ್ತಿವೆ. ನಾವೂ ಸಹ ನಮಗೆ ಅವಕಾಶ ಸಿಕ್ಕಾಗಲೆಲ್ಲ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ತಿಳಿಸಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಹುಲಕೋಟಿಯ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯವರು ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಶ್ವರೀಯ ವಿಶ್ವವಿದ್ಯಾಲಯವು ಕೇವಲ ಧಾರ್ಮಿಕ ಸೇವೆಯನ್ನಲ್ಲದೆ, ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಸಮಾಜಿಕ ಸೇವೆಗೂ ಮುಂದಾಗಿರುವುದು ಸ್ತುತ್ಯ ಕಾರ್ಯ. ಒಟ್ಟು ಒಂದು ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸಿ ಕೊಡುವ ಗುರಿಯನ್ನಿರಿಸಿಕೊಂಡಿರುವ ಈ ವಿದ್ಯಾಲಯದ ಸೇವೆ ಶ್ಲಾಘನೀಯ ಎಂದರು.
ಡಾ. ಸಂಜನಾ ಮಾತನಾಡಿ, ಕೆಲವರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಎಲ್ಲಿ ತಮ್ಮ ಮೈಯಲ್ಲಿ ರಕ್ತದ ಕೊರೆತಯಾಗುತ್ತದೆಯೋ ಎಂಬುದು ಅವರ ಅಂಜಿಕೆ. ಈ ಅಂಜಿಕೆಯನ್ನು ದೂರ ಸರಿಸಿ ಆರೋಗ್ಯವಂತ ಯುವಕ ಯುವತಿಯವರು ರಕ್ತದಾನಕ್ಕೆ ಮುಂದೆ ಬರಬೇಕು. ನೀವು ರಕ್ತ ನೀಡಿದ ಅರ್ಧ ಘಂಟೆಯೊಳಗಾಗಿ ಮತ್ತೆ ಹೊಸ ರಕ್ತ ನಿಮ್ಮ ಮೈಯಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆಯಿರುತ್ತದೆ ಎಂದರು.
ಸಂಚಾಲಕಿ ಬಿ.ಕೆ. ಸವಿತಕ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ 50 ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಗದಗ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ರೇಖಾ, ಬಿ.ಕೆ. ಜೋಸ್ನ, ಪ್ರಯೋಗಾಲಯ ತಂತ್ರಜ್ಞ ವೆಂಕಟೇಶ, ಈಶ್ವರೀಯ ಪರಿವಾರದವರು ಉಪಸ್ಥಿತರಿದ್ದರು.