ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ದಂಪತಿಯ ಮನೆಯಲ್ಲಿ ನಿಗೂಢವಾಗಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದ ಘಟನೆಗೆ ಹೊಸ ತಿರುವು ಸಿಕ್ಕಿದೆ.
ಮನೆಯ ಒಳಗೆ ಕಂಡುಬಂದ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದೀಗ ಲ್ಯಾಬ್ ವರದಿ ಬಂದು ಅದು ಮನುಷ್ಯನ ರಕ್ತವೆಂದು ದೃಢಪಟ್ಟಿದೆ.
ಸತೀಶ್ ದಂಪತಿ ವಾಸವಾಗಿದ್ದ ಮನೆಯಲ್ಲಿ ಹಾಲ್, ಬಾತ್ರೂಂ, ಟಿವಿ, ಫ್ಯಾನ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿ ಶ್ವಾನದಳದ ಸಹಾಯದಿಂದ ಮಾದರಿಗಳನ್ನು ಸಂಗ್ರಹಿಸಿದ್ದರು. ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಮನುಷ್ಯನ ರಕ್ತವೆಂದು ಸ್ಪಷ್ಟಗೊಂಡಿದ್ದು, ಅಂತಿಮ ದೃಢೀಕರಣಕ್ಕಾಗಿ ಎಫ್ಎಸ್ಎಲ್ ವರದಿ ನಿರೀಕ್ಷೆಯಲ್ಲಿದೆ.
ಈ ಬೆಳವಣಿಗೆಯಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತು ಕುತೂಹಲ ಮೂಡಿದ್ದು, ರಕ್ತ ಮನೆಯಲ್ಲಿ ಹೇಗೆ ಹರಿಯಿತು ಹಾಗೂ ಅದು ಯಾರದೆಯೆಂಬ ಪ್ರಶ್ನೆಗಳು ಪೊಲೀಸರಿಗೂ ತಲೆನೋವಾಗಿದೆ. ಸತೀಶ್ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಇರಿಸಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.
ಘಟನೆಯ ದಿನ ಬೆಳಿಗ್ಗೆ ಸತೀಶ್ ಅವರ ಪತ್ನಿ ಮನೆ ಸ್ವಚ್ಛಗೊಳಿಸುತ್ತಿದ್ದ ವೇಳೆ, ಅಡುಗೆಮನೆಗೆ ಹೋದ ಕೆಲ ಕ್ಷಣಗಳಲ್ಲೇ ಹಾಲ್ ಮತ್ತು ಬಾತ್ರೂಂ ಸೇರಿ ಹಲವು ಸ್ಥಳಗಳಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು. ಬೆಚ್ಚಿಬಿದ್ದ ದಂಪತಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಸಗರಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದ್ದು, ಪ್ರಕರಣದ ನಿಜಾಂಶ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.


