ವಿಜಯಪುರ: ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದಲ್ಲಿ ರೌಡಿಶೀಟರ್ ನನ್ನು ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಸಿದ್ದರಾಮ ದೊಂಡಿಬಾ ಕ್ಷತ್ರಿ (29) ಎಂದು ಗುರುತಿಸಲಾಗಿದ್ದು, ಆತ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಅಥವಾ ಮಹಿಳೆಯ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಸಿದ್ದು, ಘಟನೆಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ವಿವಿಧ ಕೋನಗಳಿಂದ ತನಿಖೆ ಮುಂದುವರಿದಿದೆ.



