ಲಿಬಿಯಾ: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಭುಗಿಲೆದ್ದಿದೆ. ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್–ಇಸ್ಲಾಂ ಗಡಾಫಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ವಾಯುವ್ಯ ಲಿಬಿಯಾದ ಜಿಂಟಾನ್ ನಗರದಲ್ಲಿರುವ ಅವರ ನಿವಾಸದ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಭೀಕರ ದಾಳಿ ನಡೆದಿದೆ. ಸೈಫ್ ಅಲ್–ಇಸ್ಲಾಂಗೆ 53 ವರ್ಷ ವಯಸ್ಸಾಗಿತ್ತು.
ಲಿಬಿಯಾದ ಅಧಿಕಾರಿಗಳು ಮತ್ತು ಕುಟುಂಬ ಮೂಲಗಳು ಮಂಗಳವಾರ ಈ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಸೈಫ್ ಅಲ್–ಇಸ್ಲಾಂ ಅವರ ಮನೆಗೆ ನುಗ್ಗಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ನಂತರ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಸೈಫ್ ಅಲ್–ಇಸ್ಲಾಂ ಗಡಾಫಿ ತಮ್ಮ ತಂದೆ ಮುಅಮ್ಮರ್ ಗಡಾಫಿಯ ಆಡಳಿತದ ಅವಧಿಯಲ್ಲಿ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ನಾಯಕನಾಗಿದ್ದರು. ಅವರ ಹತ್ಯೆಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಈ ಘಟನೆ ಲಿಬಿಯಾದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ವರ್ಷಗಳಿಂದ ಮುಂದುವರೆದ ರಾಜಕೀಯ ಸಂಘರ್ಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಲಿಬಿಯಾದ ಭದ್ರತಾ ಸಂಸ್ಥೆಗಳು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ದಾಳಿಕೋರರು ಕಮಾಂಡೋ ತರಬೇತಿ ಪಡೆದ ತಂಡವಾಗಿರಬಹುದೆಂದು ಶಂಕಿಸಲಾಗಿದೆ. ಹತ್ಯೆಯ ಹಿಂದೆ ರಾಜಕೀಯ ಸಂಚು ಇದೆಯೇ ಎಂಬ ಕೋನದಲ್ಲಿಯೂ ತನಿಖೆ ನಡೆಯುತ್ತಿದೆ.



