ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣ ಸೇರಿದಂತೆ ಸವಡಿ ಗ್ರಾಮದಲ್ಲಿಯೂ ಕೂಡ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸುಮಾರು 56 ಕೋಟಿ 37 ಲಕ್ಷ ರೂಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಯೋಗಿಸಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ರೋಣ ಪಟ್ಟಣ ಸೇರಿದಂತೆ ಸವಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೋಣ ಪಟ್ಟಣದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಜೆಟಿಟಿಸಿ ಮಹಾವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರೂಗಳು ಬಿಡುಗಡೆಗೊಂಡಿದ್ದು, ಕಟ್ಟಡ ಶೀಘ್ರವೇ ನಿರ್ಮಾಣವಾಗಿ ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರವೇಶಾತಿ ಕಾರ್ಯವೂ ಕೂಡ ಜರುಗಲಿದೆ ಎಂದ ಅವರು, 1 ಕೋಟಿ 90 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಂಡಿದ್ದು, ಬಡವರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅಲ್ಪ ದರದಲ್ಲಿ ರುಚಿಯಾದ ಆಹಾರವನ್ನು ಉಣ ಬಡಿಸಲಿದೆ. ನಾಗರಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸವಡಿ ಗ್ರಾಮದ ಸವಡಿ-ಹೊನ್ನಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 2 ಕೋಟಿ 50 ಲಕ್ಷ ರೂ, ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ 1 ಕೋಟಿ ರೂ, ಸವಡಿ ಗ್ರಾಮದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗ್ರಹಗಳ ನಿರ್ಮಾಣಕ್ಕೆ 97 ಲಕ್ಷ ರೂ, ಸ್ಮಶಾನ ಅಭಿವೃದ್ಧಿಗೆ 17 ಲಕ್ಷ ರೂಗಳನ್ನು ಈಗಾಗಲೇ ಒದಗಿಸಲಾಗಿದೆ. ಒಟ್ಟಿನಲ್ಲಿ ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಐ.ಎಸ್. ಪಾಟೀಲ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಅಕ್ಷಯ ಪಾಟೀಲ, ವೀರಣ್ಣ ಶೆಟ್ಟರ, ಯೂಸುಫ್ ಇಟಗಿ, ಶರಣಪ್ಪ ಬೆಟಗೆರಿ, ಬಸವರಾಜ ನವಲಗುಂದ, ತಾ.ಪಂ ಮಾಜಿ ಸದಸ್ಯರಾದ ಅಂದಪ್ಪ ಬಿಚ್ಚೂರ, ಪ್ರಭು ಮೇಟಿ, ಮುತ್ತಣ್ಣ ಸಂಗಳದ, ಆನಂದ ಚಂಗಳಿ, ಪ್ರಕಾಶ ಹೊಸಳ್ಳಿ, ಸೋಮು ನಾಗರಾಜ ಸೇರಿದಂತೆ ರೋಣ ಹಾಗೂ ಸವಡಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ರೋಣ ತಾಲೂಕಿನಲ್ಲಿ 10 ಸಾವಿರ ಕಾರ್ಮಿಕರಿದ್ದು, ಕಾರ್ಮಿಕ ಆರೋಗ್ಯ ವಾಹನದಿಂದ ಸುಮಾರ 20ರಿಂದ 25 ಸಾವಿರ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಕಾರ್ಮಿಕರ ಹಿತವನ್ನು ಬಯಸಿ ಸರಕಾರ ಸಂಚಾರಿ ವಾಹನವನ್ನು ರೋಣ, ಗಜೇಂದ್ರಗಡ ತಾಲೂಕಿಗೆ ನೀಡಿದ್ದು, ಕಾರ್ಮಿಕರು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
– ಜಿ.ಎಸ್.ಪಾಟೀಲ.
ಶಾಸಕರು, ರೋಣ.