ಬೆಂಗಳೂರು:- ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ BMRCL ಇತ್ತೀಚೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಟಿಕೆಟ್ ದರ ಏರಿಕೆ ಮಾಡಿದ್ದೇ ತಡ ಮೆಟ್ರೋಗೆ ಬರಲು ಪ್ರಯಾಣಿಕರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
ಮೆಟ್ರೋ ಟಿಕೆಟ್ ದರ ಏರಿಕೆಯಾದ ಮೇಲೆ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಮೆಟ್ರೋಗೆ ನಷ್ಟ ಉಂಟಾಗಿದೆಯಂತೆ. ಇದರಿಂದ ತಪ್ಪಿಸಿಕೊಳ್ಳಲು ಬಿಎಂಆರ್ಸಿಎಲ್ ಜಾಹೀರಾತುಗಳ ಮೊರೆ ಹೋಗಿದ್ದು, ರೈಲಿನ ಮೇಲೆ ಜಾಹೀರಾತು ಹಾಕಲು ಟೆಂಡರ್ ಕರೆದಿದ್ದು ಖಾಸಗಿ ಕಂಪನಿಗೆ ಟೆಂಡರ್ ಫೈನಲ್ ಆಗಿದ್ದು, ಏಳು ವರ್ಷಗಳ ಕಾಲ ಹಸಿರು ಮಾರ್ಗದ 10 ರೈಲು ಮತ್ತು ನೇರಳೆ ಮಾರ್ಗದ 10 ರೈಲಿನ ಮೇಲೆ ಜಾಹೀರಾತು ಹಾಕಲು ಅವಕಾಶ ನೀಡಲಾಗಿದೆ.
ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚಾರ ಮಾಡುವ 57 ರೈಲುಗಳ ಒಳಭಾಗದಲ್ಲೂ ಜಾಹೀರಾತು ಹಾಕಲು ಅನುಮತಿ ನೀಡಲಾಗಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. 20 ರೈಲಿನ ಹೊರಭಾಗದಲ್ಲಿ ಮತ್ತು 57 ರೈಲಿನ ಒಳಭಾಗದಲ್ಲಿ ಜಾಹೀರಾತು ಅಳವಡಿಸುವುದರಿಂದ ಬಿಎಂಆರ್ಸಿಎಲ್ಗೆ ವರ್ಷಕ್ಕೆ 27 ಕೋಟಿ ರೂಪಾಯಿ ಆದಾಯ ಹರಿದು ಬರಲಿದೆಯಂತೆ.
ಜಾಹಿರಾತು ಹಾಕಲು ಮುಂದಾಗಿರುವ ಬಿಎಂಆರ್ಸಿಎಲ್ ನಿರ್ಧಾರಕ್ಕೆ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ ಏರಿಕೆ ಮಾಡಿರುವುದರಿಂದ ಶೇ 50 ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಟಿಕೆಟ್ ದರ ಕಡಿಮೆ ಮಾಡಿದರೆ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಮೆಟ್ರೋಗೂ ಆದಾಯ ಬರುತ್ತದೆ ಎಂದರು.