ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಟ್ರಾಫಿಕ್ ಡಿಸಿಪಿಯಾಗಿದ್ದರು. 1963ರಲ್ಲಿ N.R.ಜಂಕ್ಷನ್‌ನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆಯಾಗಿತ್ತು.
ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ದಕ್ಷತೆ ಮತ್ತು ಪ್ರಾಮಾಣಿಕತೆಯ ರೂಪವಾಗಿದ್ದರು. ಶನಿವಾರ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
1972ರಲ್ಲಿ ಡಿಐಜಿಯಾಗಿದ್ದಾಗ, 1975ರಲ್ಲಿ ಇಂಟಲಿಜೆನ್ಸ್ ಡಿಐಜಿ ಆದಾಗ, 1976ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಾಗ ಮುಖ್ಯಮಂತ್ರಿ ದೇವರಾಜ ಅರಸರ ಆಡಳಿತವಿತ್ತು. ಅನಂತರ ಅಡಿಷನಲ್ ಐಜಿ, ಡಿಜಿ ಮತ್ತು ಐಜಿಪಿಯಾಗಿ ನಿವೃತ್ತರಾದರು.
ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬಿಂಡಿಗೇನವಿಲೆ ಗ್ರಾಮ ಮೂಲದವರಾದ ಬಿ.ಎನ್.ಗರುಡಾಚಾರ್ ರವರು ತಮ್ಮ ಶಿಕ್ಷಣವನ್ನು ಪೂರೈಸಿ,
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಂತರ ಬೆಂಗಳೂರು ಜಿಲ್ಲೆಯ ಎಸ್.ಪಿ ಹಾಗೂ ಬೆಂಗಳೂರು ಮಹಾನಗರದ ಡಿ.ಸಿ.ಪಿ ಯಾಗಿ (8 ವರ್ಷಗಳು) ಮತ್ತು ಪೊಲೀಸ್ ಕಮಿಷನರ್ ಆಗಿ (4 ವರ್ಷ 2 ತಿಂಗಳು), ಪೊಲೀಸ್ ಡಿಜಿ/ಐಜಿಪಿಯಾಗಿ (3 ವರ್ಷ 8 ತಿಂಗಳು) ಸೇವೆ ಸಲ್ಲಿಸಿದರು.