ಲಕ್ನೋ: ವೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಪಂಜಾಬ್ನಿಂದ ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಕೇಸಿ ಘಾಟ್ ಬಳಿ ಆಳವಾದ ನೀರಿಗೆ ಹೋಗಿ ತೇಲುತ್ತಿದ್ದ ಪಾಂಟೂನ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿದ್ದ ಪಾಂಟೂನ್ ಸೇತುವೆಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಆದರೆ ಕೆಲ ಪಾಂಟೂನ್ ಡ್ರಮ್ಗಳು ನದಿಯಲ್ಲೇ ಉಳಿದಿದ್ದು, ಅವುಗಳಲ್ಲಿ ಒಂದಕ್ಕೆ ದೋಣಿ ಡಿಕ್ಕಿ ಹೊಡೆದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಘಟನೆ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಅಗತ್ಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಎರಡೂ ರಾಜ್ಯಗಳ ಸರ್ಕಾರಗಳು ನಿರಂತರ ಸಂಪರ್ಕದಲ್ಲಿವೆ.
ಮೃತರಲ್ಲಿ ಬಹುತೇಕರು ಲುಧಿಯಾನಾದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರು ಎಂದು ತಿಳಿದುಬಂದಿದೆ. ಜಗ್ರಾಂವ್ನ ಶ್ರೀ ಬಂಕೆ ಬಿಹಾರಿ ಕ್ಲಬ್ನಿಂದ ಸುಮಾರು 120 ಯಾತ್ರಿಕರು ಏಪ್ರಿಲ್ 9ರಂದು ಎರಡು ಬಸ್ಗಳಲ್ಲಿ ವೃಂದಾವನಕ್ಕೆ ನಾಲ್ಕು ದಿನಗಳ ಪ್ರವಾಸಕ್ಕೆ ಬಂದಿದ್ದರು.
ಮೃತರಾದವರಲ್ಲಿ ಕವಿತಾ ರಾಣಿ (49), ಚರಂಜಿತ್ (40), ಸಪ್ನಾ ಹನ್ಸ್ (55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ ಹಾಗೂ ಮಿನು ಬನ್ಸಾಲ್ ಸೇರಿದ್ದಾರೆ.
ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ ಇನ್ನೂ ನಾಪತ್ತೆಯಾಗಿದ್ದಾರೆ.
ಗಾಯಗೊಂಡ 22 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ತಂಡಗಳು, ಸೇನೆ ಹಾಗೂ ಸ್ಥಳೀಯ ಡೈವರ್ಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.



