ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದೇ ವೇಳೆ ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಕತ್ರಿನಾ, “ನಾನು ಈ ಬಾರಿಯ ಕುಂಭಮೇಳಕ್ಕೆ ಹೋಗಿರೋದು ಅದೃಷ್ಟ. ನಾನು ತುಂಬ ಖುಷಿಯಾಗಿದ್ದೇನೆ, ಹೆಮ್ಮೆಯೂ ಆಗ್ತಿದೆ. ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ನಾನು ಇಲ್ಲಿಂದಲೇ ಹೊಸ ಅನುಭವ ಪಡೆದುಕೊಂಡೆ, ಇಡೀ ದಿನ ಇಲ್ಲೆ ಸಮಯ ಕಳೆದೆ ಎಂದಿದ್ದಾರೆ.
ಕತ್ರಿನಾ ಕೈಫ್ ಪತಿ, ಬಾಲಿವುಡ್ ನಟ ವಿಕ್ಕಿ ಕೌಶಲ್ ಈಗಾಗಲೇ ಕುಂಭಮೇಳಕ್ಕೆ ತೆರಳಿ ಪವಿತ್ರ ಸ್ನಾನಗೈದಿದ್ದರು. ತಮ್ಮ ಬಾಲಿವುಡ್ ಚಿತ್ರ ʼಛಾವಾʼದ ಬಿಡುಗಡೆ ಮುನ್ನ ಫೆ. 13ರಂದು ಪ್ರಯಾಗ್‌ರಾಜ್‌ಗೆ ತೆರಳಿ ಅವರು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಬಂದಿದ್ದರು. ಇದೀಗ ವಿಕ್ಕಿ ಕೌಶಲ್ ತಾಯಿಯೊಂದಿಗೆ ಕತ್ರಿನಾ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಮಹಾ ಕುಂಭಮೇಳ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದು, ಮಹಾ ಶಿವರಾತ್ರಿಯ ಫೆ. 26ರಂದು ಅಧಿಕೃತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 62 ಕೋಟಿ ಭಕ್ತರು ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.