ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಮತ್ತು “ಹೀ-ಮ್ಯಾನ್” ಎಂದೇ ಖ್ಯಾತಿ ಪಡೆದಿದ್ದ ಧರ್ಮೇಂದ್ರ ಅವರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನೂ ಧರ್ಮೇಂದ್ರ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಪಿಎಂ, “ಧರ್ಮೇಂದ್ರ ಜಿ ಅವರ ನಿಧನವು ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರೋರ್ವ ಐಕಾನಿಕ್ ಫಿಲ್ಮ್ ಪರ್ಸನಾಲಿಟಿಯಾಗಿದ್ದರು.
ನಿರ್ವಹಿಸಿದ ಪ್ರತೀ ಪಾತ್ರಕ್ಕೂ ಜೀವ ತಂದ ಅದ್ಭುತ ನಟ. ಅವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ರೀತಿ ಅಸಂಖ್ಯಾತ ಜನರನ್ನು ಆಕರ್ಷಿಸಿತು. ಧರ್ಮೇಂದ್ರ ಜಿ ತಮ್ಮ ಸರಳತೆ, ನಮ್ರತೆಯಿಂದಲೂ ಅಪಾರ ಮೆಚ್ಚುಗೆ ಪಡೆದರು. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳೊಂದಿಗೆ ಇವೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.


