ಗದಗ: ಗದಗ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಸ್ಫೋಟ ಮಾಡುವುದಾಗಿ ಇ-ಮೇಲ್ ಮೂಲಕ ಬಂದ ಬೆದರಿಕೆ ನಗರವನ್ನೇ ಬೆಚ್ಚಿಬೀಳಿಸಿದೆ. ಮಹಮ್ಮದ್ ರಾಜಗುರು ಎಂಬ ಹೆಸರಿನಿಂದ ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾದ ಇ-ಮೇಲ್ನಲ್ಲಿ, ಮಧ್ಯಾಹ್ನದ ವೇಳೆಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಸಂದೇಶದ ಬೆನ್ನಲ್ಲೇ ನ್ಯಾಯಾಲಯದ ಸಿಬ್ಬಂದಿ ಹಾಗೂ ಹಾಜರಿದ್ದ ಜನರು ಭೀತಿಗೊಂಡು ಕಟ್ಟಡದಿಂದ ಹೊರಗೆ ಬಂದಿದ್ದಾರೆ. ತಕ್ಷಣವೇ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.
ಎಸ್ಪಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ನ್ಯಾಯಾಲಯ ಆವರಣವನ್ನು ಸಂಪೂರ್ಣವಾಗಿ ಸೀಲ್ ಮಾಡಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆಯೇ ಎಂಬುದರ ಬಗ್ಗೆ ಸೂಕ್ಷ್ಮ ಪರಿಶೀಲನೆ ನಡೆಯುತ್ತಿದೆ.
ಇ-ಮೇಲ್ ಬಂದ ಮೂಲ, ಕಳುಹಿಸಿದ ವ್ಯಕ್ತಿಯ ಗುರುತು ಹಾಗೂ ಉದ್ದೇಶ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಕೈಗೊಂಡಿದ್ದಾರೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.



