ಹುಬ್ಬಳ್ಳಿ: ಇತ್ತೀಚಿಗೆ ಖಾಸಗಿ ಆಸ್ಪತ್ರೆಗಳಿಗೆ ಮತ್ತು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹೌದು ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ್ ಶ್ರೀಪಾದ್ ಅವರ ಅಧಿಕೃತ ಇ–ಮೇಲ್ ಖಾತೆಗೆ ‘roadkill kyo’ ಎಂಬ ಇ–ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು,
ಇದರಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಬೆದರಿಕೆ ಸಂದೇಶ ಬಂದ ಕೂಡಲೇ, ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು,
ಬಾಂಬ್ ನಿಷ್ಕ್ರಿಯಗೊಳಿಸುವ ದಳ , ಶ್ವಾನ ದಳ, ಆಂತರಿಕ ಭದ್ರತಾ ಸಿಬ್ಬಂದಿ, ಗುಪ್ತಚರ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡಂತೆ ವಿವಿಧ ತಂಡಗಳು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಸಂಪೂರ್ಣ ತಪಾಸಣೆ ನಡೆಸಿವೆ.
ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಲು ಪ್ರವೇಶ ದ್ವಾರಗಳಲ್ಲಿ ತೀವ್ರ ತಪಾಸಣೆಯನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಓಡಾಟವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಬಾಂಬ್ ತಪಾಸಣಾ ದಳವು ವಿಮಾನ ನಿಲ್ದಾಣದ ಎಲ್ಲಾ ಪ್ರದೇಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆಯಾದರೂ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಬೆದರಿಕೆಯನ್ನು ತಾತ್ಕಾಲಿಕವಾಗಿ ಕಿಡಿಗೇಡಿಗಳ ಕೃತ್ಯ ಎಂದು ಗುರುತಿಸಲಾಗಿದೆ.