ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಶಾಲಾ, ಕಾಲೇಜುಗಳಿಗೆ ಬಾಂಬ್ ಬೆದರಿಕೆ ಮೇಲ್ ಗಳು ಬರುತ್ತಿದ್ದು, ಗಾಬರಿ ಹುಟ್ಟಿಸಿದೆ. ಅದರಂತೆ ಇಂದು ಕೂಡ ನಗರದ ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಎಸ್ ಕಾಲೇಜು, ವಿ.ವಿ.ಪುರಂನಲ್ಲಿರುವ ಬಿಐಟಿ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಪತ್ರ ಬಂದಿದೆ.
ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕಿಯ ಸಿಬ್ಬಂದಿ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಮುಂಜಾಗೃತ ಕ್ರಮವಾಗಿ ಪೊಲೀಸರು ಮೂರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿದ್ದಾರೆ. ಸದ್ಯ ಪರಿಶೀಲನೆ ಮುಂದುವರೆದಿದೆ.
ಘಟನೆ ಕುರಿತು ಮಾತನಾಡಿದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್, ‘ಇಂದು ಮಧ್ಯಾಹ್ನ 1 ಗಂಟೆಗೆ ಮೂರು ಕಾಲೇಜಿಗೆ ಡೆಸ್ಕ್ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಮೇಲ್ ಬಂದಿದೆ. ಈ ಬಗ್ಗೆ ಹನುಮಂತ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುತ್ತಿದೆ.
ಮೇಲ್ ಕಳಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಮೂರು ಕಾಲೇಜುಗಳಿಗೆ ಒಂದೇ ಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಆ ಸಂಬಂಧ ತನಿಖೆ ಮುಂದುವರಿದಿದೆ ಎಂದರು.