ಧಾರವಾಡ: ಧಾರವಾಡ ಹೈಕೋರ್ಟ್ ಪೀಠಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿರುವ ಘಟನೆ ಆತಂಕ ಮೂಡಿಸಿದೆ. ಇ-ಮೇಲ್ ಮೂಲಕ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ರವಾನೆಯಾಗಿದ್ದು, ತಕ್ಷಣವೇ ವಕೀಲರು ಹಾಗೂ ಸಿಬ್ಬಂದಿ ನ್ಯಾಯಾಲಯ ಆವರಣದಿಂದ ಹೊರಬಂದಿದ್ದಾರೆ. ವಿಷಯ ತಿಳಿದು ಗರಗ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಆರಂಭಿಸಿದ್ದಾರೆ.
ಇದೇ ರೀತಿಯ ಇ-ಮೇಲ್ ಬೆದರಿಕೆ ದಾವಣಗೆರೆ ಜಿಲ್ಲಾ ನ್ಯಾಯಾಲಯ ಕ್ಕೆ ಸಹ ಬಂದಿದೆ. ಅಪರಿಚಿತ ವ್ಯಕ್ತಿ RDX ಸ್ಫೋಟಿಸುವುದಾಗಿ ಮಧ್ಯಾಹ್ನ 12:30ರ ಸಮಯ ಉಲ್ಲೇಖಿಸಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ.
ತಮಿಳುನಾಡು ಮೂಲದ ವ್ಯಕ್ತಿಯಿಂದ ನ್ಯಾಯಾಧೀಶರಿಗೆ ಈ ಇ-ಮೇಲ್ ರವಾನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಷಯ ತಿಳಿದು ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ, ಸಿಬ್ಬಂದಿ ಹೊರಬಂದಿದ್ದಾರೆ. ಶ್ವಾನ ದಳ ಮತ್ತು ಭದ್ರತಾ ಸಿಬ್ಬಂದಿಯಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಇನ್ನೂ ಮಡಿಕೇರಿ ನ್ಯಾಯಾಲಯ ಕ್ಕೂ ಸಹ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನ್ಯಾಯಾಲಯದ ಅಧಿಕೃತ ಇ-ಮೇಲ್ ಐಡಿಗೆ ಬಂದಿರುವ ಈ ಸಂದೇಶದ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.
ಬಾಂಬ್ ಪತ್ತೆ ದಳ ಹಾಗೂ ಭದ್ರತಾ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



