ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ರಜನಿಕಾಂತ್ ಮತ್ತು ನಟ ಧನುಷ್ ಅವರ ಮನೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇಮೇಲ್‌ಗಳು ಬಂದಿರುವುದಾಗಿ ತಮಿಳುನಾಡು ಪೊಲೀಸರು ತಿಳಿಸಿದ್ದಾರೆ. ಈ ಇಮೇಲ್‌ಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
ತೇನಾಂಪೇಟೆ ಪೊಲೀಸ್ ಠಾಣೆಯ ಮಾಹಿತಿಯ ಪ್ರಕಾರ, ಅಕ್ಟೋಬರ್ 27ರಂದು ಬೆಳಗ್ಗೆ ಸುಮಾರು 8.30ರ ಸುಮಾರಿಗೆ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿತ್ತು. ನಂತರ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ತೆರಳಿದರೂ, ರಜನಿಕಾಂತ್ ಅವರ ತಂಡ ಶೋಧ ಕಾರ್ಯಾಚರಣೆ ಅಗತ್ಯವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಅದೇ ದಿನ ಸಂಜೆ 6.30ರ ಸುಮಾರಿಗೆ ಮತ್ತೊಂದು ಬೆದರಿಕೆ ಇಮೇಲ್ ಬಂದಿದೆ. ಆದರೆ ಆಗಲೂ ರಜನಿಕಾಂತ್ ಅವರ ತಂಡ ಭದ್ರತಾ ಪರಿಶೀಲನೆ ನಡೆಸುವುದನ್ನು ನಿರಾಕರಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ದಿನ ನಟ ಧನುಷ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಸಹ ಬೆದರಿಕೆ ಇಮೇಲ್ ಬಂದಿತ್ತು. “ಧನುಷ್ ಅವರ ಕುಟುಂಬವೂ ಸಹ ಶೋಧ ಕಾರ್ಯಾಚರಣೆಗೆ ಅನುಮತಿ ನೀಡಲಿಲ್ಲ,” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸರು ತಿಳಿಸಿದಂತೆ, ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವಾರು ಪ್ರಮುಖ ವ್ಯಕ್ತಿಗಳಿಗೆ ಇದೇ ರೀತಿಯ ಬೆದರಿಕೆ ಇಮೇಲ್‌ಗಳು ಬಂದಿದ್ದು, ಸೈಬರ್ ಅಪರಾಧ ವಿಭಾಗವು ಅವುಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿವೆ ಎಂದಿದ್ದಾರೆ.

