ನವದೆಹಲಿ: ಶೈಕ್ಷಣಿಕ ವರ್ಷಾಂತ್ಯದ ಹಿನ್ನೆಲೆ ಶಾಲೆಗಳಲ್ಲಿ ಅಂತಿಮ ಪರೀಕ್ಷೆಗಳ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ, ರಾಷ್ಟ್ರ ರಾಜಧಾನಿ ನವದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು ಆತಂಕ ಸೃಷ್ಟಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ದೆಹಲಿಯ ಒಟ್ಟು 9 ಶಾಲೆಗಳಿಗೆ ಬೆಳಗ್ಗೆ 8.30ರಿಂದ 9 ಗಂಟೆಯೊಳಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಮಾಹಿತಿ ದೊರಕಿದ ತಕ್ಷಣವೇ ಸಂಬಂಧಿಸಿದ ಶಾಲೆಗಳ ಆವರಣದಲ್ಲಿ ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಭದ್ರತಾ ಪರಿಶೀಲನೆ ಆರಂಭಿಸಿದ್ದಾರೆ.
ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಾಯುಪಡೆ ಶಾಲೆ, ಕೆ.ಆರ್. ಮಂಗಲಂ ಶಾಲೆ ಹಾಗೂ ಸಾದಿಕ್ ನಗರದಲ್ಲಿನ ದಿ ಇಂಡಿಯನ್ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಬೆದರಿಕೆಯ ಗುರಿಯಾಗಿವೆ.
ಇದಲ್ಲದೆ, ದೆಹಲಿ ಕ್ಯಾಂಟ್‌ನ ಲೊರೆಟೊ ಕಾನ್ವೆಂಟ್ ಶಾಲೆ, ಶ್ರೀನಿವಾಸನ್‌ಪುರಿಯ ಕೇಂಬ್ರಿಡ್ಜ್ ಶಾಲೆ, ರೋಹಿಣಿಯ ವೆಂಕಟೇಶ್ವರ ಶಾಲೆ, ನ್ಯೂ ಫ್ರೆಂಡ್ಸ್ ಕಾಲೊನಿಯ ಕೇಂಬ್ರಿಡ್ಜ್ ಶಾಲೆ, ರೋಹಿಣಿಯ ಸಿಎಂ ಶಾಲೆ, ಐಎನ್‌ಎಯ ಡಿಟಿಎ ಶಾಲೆ ಹಾಗೂ ರೋಹಿಣಿಯ ಬಾಲ ಭಾರತಿ ಶಾಲೆಗಳಿಗೆ ಕೂಡಾ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ.
ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಶಾಲಾ ಕಟ್ಟಡಗಳಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಭದ್ರತಾ ಸಿಬ್ಬಂದಿ ತರಗತಿ ಕೊಠಡಿಗಳು, ಕಾರಿಡಾರ್‌ಗಳು, ಆಟದ ಮೈದಾನಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಕ್ಷ್ಮ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಬೆದರಿಕೆ ಇಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.



