ಲಕ್ನೋ: ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬರೆದ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಇಂಡಿಗೋ ವಿಮಾನ 6E-6650 ದೆಹಲಿಯಿಂದ ಬಾಗ್ಡೋಗ್ರಾಗೆ ಹಾರಾಟ ನಡೆಸುತ್ತಿತ್ತು. ಹಾರಾಟದ ವೇಳೆ ವಿಮಾನದ ಶೌಚಾಲಯದಲ್ಲಿರುವ ಟಿಶ್ಯೂ ಪೇಪರ್ ಮೇಲೆ “ವಿಮಾನದಲ್ಲಿ ಬಾಂಬ್ ಇದೆ” ಎಂದು ಬರೆದಿರುವುದು ಸಿಬ್ಬಂದಿಗೆ ಗಮನಕ್ಕೆ ಬಂದಿದೆ.
ತಕ್ಷಣವೇ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದ್ದು, ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಬೆಳಿಗ್ಗೆ 8:46ರ ಸುಮಾರಿಗೆ ಎಟಿಸಿಗೆ ಬಾಂಬ್ ಬೆದರಿಕೆ ಕುರಿತ ಸಂದೇಶ ರವಾನೆಯಾಗಿದ್ದು, ವಿಮಾನವು ಬೆಳಿಗ್ಗೆ 9:17ಕ್ಕೆ ಸುರಕ್ಷಿತವಾಗಿ ಲಕ್ನೋದಲ್ಲಿ ಇಳಿಯಿತು.
ಈ ಘಟನೆಯ ಕುರಿತು ಸಂಬಂಧಿಸಿದ ಭದ್ರತಾ ಮತ್ತು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಸಂಪೂರ್ಣ ಭದ್ರತಾ ತಪಾಸಣೆಗೆ ಇಂಡಿಗೋ ಏರ್ಲೈನ್ಸ್ ಸಹಕರಿಸುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರಿಗೆ ಉಪಾಹಾರ ಒದಗಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಇಂಡಿಗೋ ಏರ್ಲೈನ್ಸ್ ಸ್ಪಷ್ಟಪಡಿಸಿದೆ.



