ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳ ಮೇಲೆ ಮತ್ತೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.
ಇಟಲಿ ಮತ್ತು ಜಪಾನ್ ಕಾನ್ಸುಲೇಟ್ ನಂತರ, ಈಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಆರ್‍ಟಿ ನಗರದ ಗಂಗಾನಗರದಲ್ಲಿ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿ ಜನವರಿ 29ರಂದು ಕಿಡಿಗೇಡಿಗಳಿಂದ ಇ-ಮೇಲ್ ಪಡೆದಿದ್ದು, ಅವರು “5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.
ರಾಯಭಾರಿ ಕಚೇರಿಯ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಈ ಕುರಿತು ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ, ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಹಲಸೂರಿನ ಇಟಾಲಿಯನ್ ಕಾನ್ಸುಲೇಟ್‌ಗೆ ಕೂಡ gaina_ramesh@outlook.com ವಿಳಾಸದಿಂದ bangalore.visa@esteri.it ಗೆ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂಬ ಸಂದೇಶ ಕಳುಹಿಸಲಾಗಿತ್ತು. ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದಲ್ಲದೆ, ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿಗೆ ಅಪರಿಚಿತ ಸಂಖ್ಯೆಯಿಂದ “Please be careful, someone will kill you” ಎಂದು ಕೊಲೆ ಬೆದರಿಕೆ ಕರೆ ಬಂದಿತ್ತು. ಈ ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಸದ್ಯ, ಇಟಲಿ, ಜಪಾನ್ ಮತ್ತು ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದ ಬೆದರಿಕೆಗಳ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಇ-ಮೇಲ್ ಐಡಿ ಮತ್ತು ಕರೆಗಳ ಜಾಡು ಬೆನ್ನತ್ತಿದ್ದು, ರಾಯಭಾರಿ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.



