ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಘಟನೆ ಆತಂಕ ಮೂಡಿಸಿದೆ. ಇದಲ್ಲದೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೂ ಇ-ಮೇಲ್ ಮೂಲಕ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.
ಲಾರೆಟೋ ಕಾನ್ವೆಂಟ್ ಶಾಲೆ (ದೆಹಲಿ ಕ್ಯಾಂಟ್)ಗೆ ಬೆಳಿಗ್ಗೆ 8:22ಕ್ಕೆ, ಡಾನ್ ಬಾಸ್ಕೊ ಶಾಲೆ (ಸಿ.ಆರ್. ಪಾರ್ಕ್)ಗೆ 9:18ಕ್ಕೆ, ಕಾರ್ಮೆಲ್ ಶಾಲೆ (ಆನಂದ್ ನಿಕೇತನ್)ಗೆ 9:22ಕ್ಕೆ ಹಾಗೂ ಕಾರ್ಮೆಲ್ ಶಾಲೆ (ಸೆಕ್ಟರ್ 23, ದ್ವಾರಕಾ)ಗೆ 9:25ಕ್ಕೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಗಳಿಗೆ ದೂರವಾಣಿ ಮೂಲಕ ಬೆದರಿಕೆ ನೀಡಲಾಗಿದ್ದರೆ, ಪಂಜಾಬ್–ಹರಿಯಾಣ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಾಹಿತಿ ದೊರಕುತ್ತಿದ್ದಂತೆ ಪೊಲೀಸ್ ತಂಡಗಳು ತಕ್ಷಣ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದವು.
ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಬುಧವಾರ ಚಂಡೀಗಢ, ಗುರುಗ್ರಾಮ್ ಹಾಗೂ ಹರಿಯಾಣದ ಇತರೆ ಭಾಗಗಳಲ್ಲಿಯೂ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ತಪಾಸಣೆ ನಡೆಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



