ನವದೆಹಲಿ: ದೆಹಲಿಯ 20ಕ್ಕೂ ಹೆಚ್ಚು ಶಾಲೆಗಳಿಗೂ ಬಾಂಬ್ ಬೆದರಿಕೆ ಇ–ಮೇಲ್ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಶಾಲೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ದೆಹಲಿಯ ಪಶ್ಚಿಮ ವಿಹಾರ್ನ ಒಂದು ಶಾಲೆಯ ಆವರಣದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಇ–ಮೇಲ್ ಬಂದಿರುವುದಾಗಿ ವರದಿಯಾಗಿದೆ.
ರೋಹಿಣಿ ಸೆಕ್ಟರ್ 3 ರಲ್ಲಿರುವ ಅಭಿನವ್ ಪಬ್ಲಿಕ್ ಶಾಲೆಗೆ ಕೂಡ ಬಾಂಬ್ ಬೆದರಿಕೆ ಬಂದಿದೆ. ಪಶ್ಚಿಮ ವಿಹಾರ್ ಪ್ರದೇಶದ ರಿಚ್ಮಂಡ್ ಗ್ಲೋಬಲ್ ಶಾಲೆಗೆ ಇಂದು ಬಾಂಬ್ ಬೆದರಿಕೆ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ.
ಅಗ್ನಿಶಾಮಕ ದಳ ಮತ್ತು ದೆಹಲಿ ಪೊಲೀಸರು ತನಿಖೆಗಾಗಿ ಸ್ಥಳದಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ ರೋಹಿಣಿ ಸೆಕ್ಟರ್ 24 ರಲ್ಲಿರುವ ಸಾವರಿನ್ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಒಂದೇ ದಿನದಲ್ಲಿ ದೆಹಲಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಹಲವಾರು ಬೆದರಿಕೆಗಳು ಬಂದಿವೆ. ಪೊಲೀಸರ ಪ್ರಕಾರ, ಬಾಂಬ್ ಬೆದರಿಕೆ ಇ–ಮೇಲ್ನಲ್ಲಿ ನಾನು ಶಾಲಾ ತರಗತಿಗಳಲ್ಲಿ ಹಲವಾರು ಸ್ಫೋಟಕ ಸಾಧನಗಳನ್ನು ಇಟ್ಟಿದ್ದೇನೆ,
ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಮರೆಮಾಡಲಾಗಿದೆ. ಎಲ್ಲರನ್ನೂ ಕೊಲ್ಲುತ್ತೇನೆ ಒಬ್ಬರನ್ನೂ ಉಳಿಸುವುದಿಲ್ಲ, ಪೋಷಕರು ಮಕ್ಕಳ ಛಿದ್ರಗೊಂಡ ದೇಹವನ್ನು ನೋಡಿ ದುಃಖಿಸಬೇಕು ಆ ಸುದ್ದಿ ನೋಡಿ ನಾನು ನಗಬೇಕು ಎಂದು ಬರೆಯಲಾಗಿದೆ. ನನಗೆ ನನ್ನ ಜೀವನ ನಿಜಕ್ಕೂ ಇಷ್ಟವಿಲ್ಲ. ಈ ಸುದ್ದಿ ಬಂದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.



