ವಿಜಯಸಾಕ್ಷಿ ಸುದ್ದಿ, ಗದಗ: ಓದುವ ಸಂಸ್ಕೃತಿಯನ್ನೇ ಮರೆತಿರುಬಹುದಾದ ಈಗಿನ ವಿದ್ಯಾರ್ಥಿಗಳಲ್ಲಿ ಮತ್ತೆ ಓದುವ ಸಂಸ್ಕೃತಿಯನ್ನು ಹೆಚ್ಚಿಸಬೇಕು. ಪುಸ್ತಕದ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎನ್ನುವ ದಿಶೆಯಲ್ಲಿ ಕಲಾ ವಿಕಾಸ ಪರಿಷತ್ತಿನವರು ಹಮ್ಮಿಕೊಂಡಿರುವ ಈ ಪುಸ್ತಕ ದಾಸೋಹ ಕಾರ್ಯಕ್ರಮ ಅಭಿನಂದನಾರ್ಹವಾದುದು ಎಂದು ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಡಾ. ಎಸ್.ವಾಯ್. ಚಿಕ್ಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗದುಗಿನ ಕಲಾ ವಿಕಾಸ ಪರಿಷತ್ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಏರ್ಪಡಿಸಿದ್ದ ಕಲಾ ವಿಕಾಸ ಪುಸ್ತಕ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಭೂತಿ ಮಾಸಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಮಾತನಾಡಿ, ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಿಗೆ ಉಂಟಾಗುವ ಲಾಭಗಳು, ಪುಸ್ತಕಗಳ ಮಹತ್ವ, ನಿರಂತರ ಓದು ವ್ಯಕ್ತಿಯ ಬದುಕನ್ನು ಹೇಗೆ ಬದಲಿಸಬಲ್ಲದು ಎಂಬುದನ್ನು ತಿಳಿಸಿದರು.
ಪುಸ್ತಕ ದಾಸೋಹದ ರೂವಾರಿ ಕಲಾ ವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಎಚ್. ಶಾಸ್ತ್ರಿ ಕಡಣಿ ಪುಸ್ತಕ ದಾಸೋಹದ ಆಶಯವನ್ನು ತಿಳಿಸಿ, 25 ವರ್ಷಗಳಿಂದ ಕಲಾ ವಿಕಾಸ ಪರಿಷತ್ತಿನ ಅಡಿಯಲ್ಲಿ ಕಲೆಯನ್ನು ಸಾರ್ವತ್ರಿಕಗೊಳಿಸಿ ಕಲಾ ಪ್ರತಿಭೆಗಳನ್ನು ಪರಿಚಯಿಸಿದ ಮತ್ತು ನಾಡಿನ ಉದ್ದಗಲಕ್ಕೂ ಮಾತ್ರವಲ್ಲದೆ ದೇಶದಾದ್ಯಂತ ಕಲಾ ಸೇವೆ ಸಲ್ಲಿಸಿದ ಪರಿಷತ್‌ನ ಪರಿಚಯ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯಿಂದ `ರಿಯಲ್ ಸ್ಟಾರ್’ ರಾಜ್ಯಪ್ರಶಸ್ತಿ ಪಡೆದ ನಿಮಿತ್ತ ಪ್ರೊ. ಎಸ್.ವಾಯ್. ಚಿಕ್ಕಟ್ಟಿಯವರನ್ನು ಮತ್ತು ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ಶೇ.98 ಅಂಕ ಪಡೆದ ವಿದ್ಯಾರ್ಥಿ ಸಾರಿಕಾ ಕಾಲವಾಡಮಠರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯಾಧ್ಯಾಪಕಿ ಶೋಭಾ ಸ್ಥಾವರಮಠ ಸ್ವಾಗತಿಸಿದರು. ಬಡಿಗೇರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.