ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ್ದೇಶದಿಂದ, ಕಳೆದ 23 ವರ್ಷಗಳಿಂದಲೂ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷವೂ ಈ ಪ್ರಶಸ್ತಿಗಾಗಿ 2023-24 ಸಾಲಿನಲ್ಲಿ ಪ್ರಕಟವಾದ, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.
ಈ ರಾಜ್ಯ ಪ್ರಶಸ್ತಿಯು 5 ಸಾವಿರ ರೂ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಯಾದ ಕೃತಿಕರ್ತರಿಗೆ ಡಾ. ಪಂ. ಪುಟ್ಟರಾಜರ ಪುಣ್ಯಸ್ಮರಣೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಸಮೀಪದ ಪ್ರತಿಸ್ಪರ್ದಿಯಾದ ವಿವಿಧ ಪ್ರಕಾರದ 10 ಕೃತಿಗಳನ್ನು ಗುರುತಿಸಿ ವರ್ಷದ ಶ್ರೇಷ್ಠ ಕೃತಿರತ್ನ ಸಮ್ಮಾನ ನೀಡಿ ಗೌರವಿಸಲಾಗುವುದು ಎಂದು ಸೇವಾ ಸಮಿತಿಯ ಕಾರ್ಯಕಾರಿಣಿ ಸದಸ್ಯರು ಮತ್ತು ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯ ಸಂಚಾಲಕರೂ ಆಗಿರುವ ಡಾ. ಸುಮಾ ಹಡಪದ ಹಳಿಯಾಳ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಆಸಕ್ತ ಲೇಖಕರು ತಮ್ಮ ಭಾವಚಿತ್ರ ಸಹಿತ ಪರಿಚಯ ಪತ್ರ, ಎಪ್ರಿಲ್ 1, 2023ರಿಂದ 2024 ಮಾರ್ಚ 31ರ ಒಳಗಾಗಿ ಪ್ರಕಟವಾದ 3 ಕೃತಿಗಳೊಂದಿಗೆ ಜುಲೈ 10ರ ಒಳಗಾಗಿ ತಲುಪುವಂತೆ ಸಿ.ಕೆ. ಹೆಚ್ ಶಾಸ್ತ್ರೀ (ಕಡಣಿ) ಸದಸ್ಯರು: ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಆಯ್ಕೆ ಸಮಿತಿ, ‘ಗಿರಿಜಾ ನಿವಾಸ’, ಪಂಚಾಕ್ಷರಿ ನಗರ 3ನೇ ಅಡ್ಡರಸ್ತೆ, ಗದಗ-582101 ಇಲ್ಲಿಗೆ ತಲುಪಿಸಲು ಕೋರಲಾಗಿದೆ.