ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಪು.ಬಡ್ನಿ ಗ್ರಾಮದ ಭುವನ್ ರವಿ ಕೊರಕನವರ ಎಂಬ ಪುಟ್ಟ ಪ್ರತಿಭೆ ತನ್ನದೇ ಆದ ವಿಶೇಷ ಜ್ಞಾನ, ಪ್ರತಿಭೆ ಪ್ರದರ್ಶಿಸುವ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸೇರುವದರೊಂದಿಗೆ ವಿಶೇಷ ಸಾಧನೆ ಮಾಡಿದ್ದಾನೆ.
2 ವರ್ಷ 7 ತಿಂಗಳ ವಯಸ್ಸಿನ ಬಾಲ ಪ್ರತಿಭೆ ಭುವನ್ ಅಸಾಮಾನ್ಯ ನೆನಪಿನ ಶಕ್ತಿ ಹೊಂದಿದ್ದಾನೆ.
ಸಾಮಾನ್ಯ ಜ್ಞಾನದ ಅನೇಕ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡುತ್ತಾನೆ. ಅನೇಕ ಪ್ರಾಣಿಗಳು, ಪಕ್ಷಿಗಳು, ತರಕಾರಿಗಳು, ಹಣ್ಣುಗಳು, ಕ್ರೀಡಾ ಸಲಕರಣೆಗಳು ಹಾಗೂ ಗಣ್ಯ ವ್ಯಕ್ತಿಗಳು ಮತ್ತು ಗಣಿತ ಆಕೃತಿಗಳನ್ನು ಹೆಸರು ಸಮೇತ ಶರವೇಗದಲ್ಲಿ ಗುರುತಿಸುತ್ತಾನೆ. ವಾಹನಗಳ ಹೆಸರುಗಳು, ದೇಶದ ರಾಜ್ಯಗಳು ಹಾಗೂ ಅವುಗಳ ರಾಜಧಾನಿಗಳ ಹೆಸರುಗಳನ್ನು ಹೇಳುವ ಪುಟ್ಟ ಪೋರ, ಆರು ವಿಧದ ಸಂಸ್ಕೃತ ಶ್ಲೋಕಗಳನ್ನೂ ಹೇಳುವ ಮೂಲಕ ಎಂತವರನ್ನೂ ಹುಬ್ಬೇರಿಸುವಂತೆ ಮಾಡಿ ಬಡ್ನಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಈತನ ಜ್ಞಾನ ಭಂಡಾರ ಹೆಚ್ಚಿಸುವಲ್ಲಿ ತಂದೆ-ತಾಯಿಗಳು ಅತ್ಯಂತ ಖುಷಿಯಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ಪುಟಾಣಿ ಪ್ರತಿಭೆಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ.