ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಜೀವನದಲ್ಲಿ ಮನುಷ್ಯ ಸಫಲತೆ ಹೊಂದಬೇಕಾದರೆ ಶ್ರದ್ಧೆ, ಸಮರ್ಪಣೆ ಹಾಗೂ ಸಹನೆ ಇರಬೇಕು. ಪ್ರಕೃತಿದತ್ತವಾಗಿರುವದನ್ನು ಒಪ್ಪಿಕೊಂಡು ಮುನ್ನಡೆದಾಗ ಮಾತ್ರ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಪಟ್ಟಣದ ವಿ.ಎಲ್. ನಾಡಗೌಡ್ರ ವಾಡೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಮಿಕ ಸಂಘಟನೆಯ 2ನೇ ವರ್ಷದ ವಾರ್ಷಿಕೋತ್ಸವ `ಜನಹಿತ ಚಿಂತನಾ ಸಮಾರಂಭ’ದಲ್ಲಿ ಲೇಖಕ ಬಸವರಾಜ ಬೆನ್ನೂರ ಅವರ `ಓ ಸೋಲೇ… ಥ್ಯಾಂಕ್ಯೂ’ ಮತ್ತು `ಸೋಲು ಸೋಲಿಸದು’ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸೋಲು-ಗೆಲವು ಎಂಬುದು ಬೇರೆ ಏನೂ ಅಲ್ಲ, ಯಾರೇ ಆಗಲಿ ಮತ್ತೊಬ್ಬರ ಮೇಲೆ ಅವಲಂಬನೆಯಾಗದೆ ತಮ್ಮ ತೋಳ್ಬಲ, ಕಾಲಿನ ಶಕ್ತಿ ಮೇಲೆ ಹೋಗಬೇಕು ಎಂದು ಶ್ರೀಗಳು ನುಡಿದರು.
ಬೆಂಗಳೂರಿನ ಕವಿ ವಾಸುದೇವ ನಾಡಿಗ್ ಹಾಗೂ ಸಾಹಿತಿ ಡಾ. ನಿಂಗು ಸೊಲಗಿ ಪುಸ್ತಕಗಳ ಕುರಿತು ಮಾತನಾಡಿ, ಮನುಷ್ಯನಿಗೆ ಸೋಲು ಸಹಜ ರೀತಿಯಾಗಿರುತ್ತದೆ. ಯಾರೂ ಜೀವನದಲ್ಲಿ, ಬದುಕಿನ ಸ್ಪರ್ಧೆಗಳಲ್ಲಿ ಸೋಲಲು ಬಯಸುವದಿಲ್ಲ. ಸೋಲಿನ ಬಗ್ಗೆ ತಿರಸ್ಕಾರ ಹೊಂದುವ ಸಹಜ ಜೀವನದಲ್ಲಿ ಸೋಲಿಗೆ ಧನ್ಯವಾದಗಳನ್ನು ಹೇಳುತ್ತ ಜೀವನದ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಸಂದೇಶಗಳನ್ನು ಪುಸ್ತಕಗಳಲ್ಲಿ ಬಿಂಬಿಸಿರುವದು ಹೊಸ ಪರಿಯ ಬರವಣಿಗೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸೋಲು ಸೋಲಿಸದು ರಾಜ್ಯ ಮಟ್ಟದ ಲೇಖನಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಭಾಗ್ಯವಸು, ತೃತಿಯ ಸ್ಥಾನ ಪಡೆದ ಮುತ್ತು ವಡ್ಡರ, ಹಾಗೂ ಉಮಾ ಹುಲಗಣ್ಣವರ ಅವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾ.ಪಂ ಇಒ ವಿಶ್ವನಾಥ ಹೊಸಮನಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಮಿಕ ಸಂಘಟನೆಯ ಅಧ್ಯಕ್ಷ ಅಡಿವೆಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಲೇಖಕ ಬಸವರಾಜ ಬೆನ್ನೂರ, ದೇವಪ್ಪ ಚಿಕ್ಕಣ್ಣವರ, ಸಮೀರ ನಾಡಗೌಡ್ರ, ದೇವು ಹಡಪದ, ಗಣೇಶ ಭರಮಕ್ಕನವರ, ಆನಂದ ರಾಮೇನಹಳ್ಳಿ, ಶಿವು ವಾಲಿಕಾರ, ನಾಗರಾಜ ಮುಖ್ಯೆ, ಜೀವನಸಾಬ ವಡ್ಡಟ್ಟಿ, ವಿನೋದ ವಡ್ಡರ, ಮಂಜುನಾಥ ಇಟಗಿ, ಮಲ್ಲನಗೌಡ ಹೊರಗಲಮನಿ, ಅಶ್ವಿನಿ ಗೌಡರ, ಹಸನ್ ಅಳವಂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಿ.ಕೆ. ಗಣಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಅಡಿವಿಸೋಮಾಪಾರದ ವೀರಣ್ಣ ಅಂಗಡಿ ಕಲಾ ತಂಡದಿಂದ ಜಾನಪದ ಗೀತೆಗಳು ಜರುಗಿದವು.
ಗದಗ ಬಿಸಿಎಂ ಅಧಿಕಾರಿ ಡಾ.ಬಸವರಾಜ ಬಳ್ಳಾರಿ ಮಾತನಾಡಿ, ಪ್ರತಿಭಾವಂತ ಸಾಹಿತಿಗಳ ಪ್ರೋತ್ಸಾಹಕ್ಕೆ ಇಂತಹ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ಒಬ್ಬ ಲೇಖಕನಿಗೆ ಇರಬೇಕಾದ ಸಹನೆ ಮತ್ತು ಕಷ್ಟಕಾರ್ಪಣ್ಯಗಳ ಅರಿವು ಪಡೆದುಕೊಂಡು ಪುಸ್ತಕಗಳನ್ನು ಸಮಾಜಕ್ಕೆ ನೀಡಿದ ಬಸವವರಾಜ ಅವರ ಪ್ರಯತ್ನ ಮೆಚ್ಚುವಂತಿದೆ. ಕೊಪ್ಪಳ ಗವಿಶ್ರೀಗಳ ಸಮ್ಮುಖದಲ್ಲಿ ಲೋಕಾರ್ಪಣೆಯಾಗುತ್ತಿರುವದು ಸಂತೋಷದ ವಿಷಯ ಎಂದರು.