
ವಿಜಯಸಾಕ್ಷಿ ಸುದ್ದಿ, ಗದಗ: ಜ್ಞಾನಾಚರಣೆಯ ಮಾಧ್ಯಮದ ಪ್ರಮುಖ ಸಾಧನವೇ ಪುಸ್ತಕಗಳು. ಪುಸ್ತಕ ಹಾಗೂ ಪುಸ್ತಕ ಸಂಸ್ಕೃತಿ, ಇವುಗಳ ಓದು ನಮ್ಮೆಲ್ಲರ ಬದುಕಿನಲ್ಲಿ ಅತ್ಯಗತ್ಯವಾಗಿವೆ. ವಿದ್ಯಾವಂತ ಸಮಾಜಕ್ಕೆ ಉತ್ತಮ ಪುಸ್ತಕಗಳ ಓದು ಅವಶ್ಯ. ಓದುವ ಹವ್ಯಾಸವು ವಿದ್ಯಾರ್ಥಿಗಳಲ್ಲಿ ಜ್ಞಾನದ ಹರಿವನ್ನು ಇಮ್ಮಡಿಗೊಳಿಸುತ್ತವೆ. ಮಕ್ಕಳು ಓದುವ ಹವ್ಯಾಸವನ್ನು ಅಳವಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಹೇಳಿದರು.
ಅವರು ಸೋಮವಾರ ಗದುಗಿನ ಹಿರಿಯ ಪ್ರಾಥಮಿಕ ಶಾಲೆ ನಂ.10ರಲ್ಲಿ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತ ಭೋಜನ-ಜ್ಞಾನ ಸಿಂಚನ ಕಾರ್ಯಕ್ರಮ ಮಾಲಿಕೆ-27ರ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ, ಕಥೆಗಳ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕಗಳು ಆಯಾ ಕಾಲಗಳ ಸಂಸ್ಕೃತಿಯ ಜೀವಂತ ಪ್ರತೀಕ. ಒಂದು ಕಾಲಮಾನದ ನಿಖರ ಮಾಹಿತಿ ನಮಗೆ ತಿಳಿದುಬರುವುದು ಪುಸ್ತಕಗಳಿಂದ. ಪುಸ್ತಕಗಳು ಕೇವಲ ನಿರ್ಜೀವ ವಸ್ತುಗಳಲ್ಲ. ಅವು ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆಗಳಾಗಿವೆ. ಮಕ್ಕಳು ಗ್ರಂಥಾಲಯಗಳ ಸದ್ಭಳಕೆ, ಸಾಧಕರ ಜೀವನ ಚರಿತ್ರೆ, ನೀತಿ ಕಥೆಗಳಂತಹ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಮಾತನಾಡಿ, ಬಾಲ್ಯಾವಸ್ಥೆಯಲ್ಲಿಯೇ ಓದಿನ ಗೀಳು ರೂಢಿಸಿಕೊಳ್ಳಬೇಕು. ಸತತ ಓದು, ಓದುವ ಪದ್ಧತಿ ಬಹಳ ಮುಖ್ಯ. ತಪ್ಪಿಲ್ಲದಂತೆ ಓದುವುದು ಒಂದು ಕಲೆ. ಕಥೆ, ಕವನ, ಪಾಠ, ಪದ್ಯ ಓದುವುದು ಒಳ್ಳೆಯದು. ಮಕ್ಕಳು ತಾವು ಓದಿದ ಪುಸ್ತಕಗಳ ಕುರಿತು ಸ್ನೇಹಿತರು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಚರ್ಚಿಸುವುದರಿಂದ ವಿಚಾರಗಳು ಪರಸ್ಪರ ವಿನಿಮಯಗೊಂಡು ತಾರ್ಕಿಕ ಮನೋಭಾವ ಮೂಡಿ ಬರುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಎಂ.ಎ. ಯರಗುಡಿ ಮಾತನಾಡಿ, ಮಕ್ಕಳು ಪ್ರತಿದಿನ ಪಠ್ಯಪುಸ್ತಕದ ಜೊತೆಗೆ ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಕ್ಕೆ ಭೇಟಿಕೊಟ್ಟು ಪುಸ್ತಕ ಭಂಡಾರದ ಪರಿಚಯ ಮಾಡಿಕೊಳ್ಳಬೇಕು. ಮಕ್ಕಳಿಗೆ ಪ್ರಿಯವಾದ ಪಂಚತಂತ್ರ ಕಥೆಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಕಥೆ ಓದಿ ಕಥೆ ಹೇಳುವ ಶೈಲಿಯನ್ನು ಕಲಿಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ಡಿ. ಮಂಗಳೂರ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕಗಳು ಜಗತ್ತನ್ನೇ ಆಳುತ್ತವೆ. ಓದುವ ಹವ್ಯಾಸ ಇನ್ನಷ್ಟು ವೃದ್ಧಿಯಾಗಲು ಮನೆಯ ಹಿರಿಯರಿಂದ ಕಥೆ, ಅವರ ಜೀವನದ ಅನುಭವವನ್ನು ಕೇಳಿ ಅದನ್ನು ಲಿಖಿತವಾಗಿ ಬರೆದಿಡುವುದು ಒಳ್ಳೆಯದು. ಶಾಲೆಯಲ್ಲಿ ಓದಿರುವುದನ್ನು ಸಹಪಾಠಿಗಳೊಂದಿಗೆ ಚರ್ಚಿಸಿ ದಾಖಲಿಸಿಕೊಂಡರೆ ಮುಂದೆ ಪರೀಕ್ಷೆಯಲ್ಲಿ ಯಶಸ್ಸು ಸುಲಭವಾಗುವುದು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಫ್.ಎ. ನಮಾಜಿ ಮಾತನಾಡಿ, ಕದಳಿಶ್ರೀ ವೇದಿಕೆಯು ಶಾಲೆಗಳಲ್ಲಿ ಅಮೃತ ಭೋಜನ-ಜ್ಞಾನಸಿಂಚನದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳಿಗೆ ಇಂದು ಕಥೆ ಹೇಳುವ, ಓದುವ ಹವ್ಯಾಸದ ಕುರಿತು ಉಪನ್ಯಾಸ ಏರ್ಪಡಿಸಿ ಕಲಿಕಾ ಸಾಮಗ್ರಿ ಜೊತೆಗೆ ಮಕ್ಕಳಿಗೆ ಸಿಹಿ ಭೋಜನ ವಿತರಿಸಿದ್ದು, ಇದು ಮಕ್ಕಳ ಕಲಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಬೃಂದಾ ಮುಧೋಳರನ್ನು ಕದಳಿಶ್ರೀ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅನ್ನಪೂರ್ಣ ಶಿಂಗಟಾಲಕೇರಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ನಿರೂಪಿಸಿ ವಂದಿಸಿದರು. ನೀಲಮ್ಮ ಗುಜ್ಜಾಯಿ, ಸುಧಾ ಗುತ್ತಿ, ದಿಲ್‌ಶಾದ್ ಹಳ್ಳಾಳ, ರಾಧಾ ಕಟ್ಟಿಮನಿ, ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಪುಸ್ತಕಗಳು ಜೀವನದಲ್ಲಿ ಪ್ರಭಾವ ಬೀರಬಲ್ಲ ಉತ್ತಮ ಸಾಧನ. ಬೌದ್ಧಿಕ ಹಾಗೂ ಸಾಂಸ್ಕೃತಿಕ ಸಂಪನ್ಮೂಲಗಳಾಗಿವೆ. ಉತ್ತಮ ಸ್ನೇಹಿತನಂತೆ ಇವು ನಮಗೆ ಸಹಕಾರಿಯಾಗುತ್ತವೆ. ಪುಸ್ತಕವು ಹೇಳುತ್ತದೆ ನನ್ನನ್ನು ತಲೆತಗ್ಗಿಸಿ ಏಕಾಗ್ರತೆಯಿಂದ ಓದು, ನಾನು ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ ಎಂದು. ಹೀಗಾಗಿ ಮಕ್ಕಳು ಸರಿಯಾದ ಪದ್ಧತಿ ಉಪಯೋಗಿಸಿ ತಪ್ಪಿಲ್ಲದಂತೆ ಓದುವ ರೂಢಿ ಮಾಡಿಕೊಳ್ಳಬೇಕು ಎಂದರು.

