ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಶಾಲೆಗಳಲ್ಲಿ ಡಿಸೆಂಬರ್ ಒಳಗಾಗಿ ಪಠ್ಯಕ್ರಮ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಪೂರ್ಣಗೊಳಿಸಿದ್ದು, ಜನವರಿ 20ರಿಂದ ಪ್ರಾರಂಭವಾಗುವ ವಿಭಾಗ ಮಟ್ಟದ ಪರೀಕ್ಷೆಗೆ ತಮ್ಮ ಮಕ್ಕಳನ್ನು ಸೂಕ್ತ ರೀತಿಯಲ್ಲಿ ತಯಾರುಗೊಳಿಸುವುದು, ಸಾಮರ್ಥ್ಯ ಅನ್ವೇಷಣೆ ಪರೀಕ್ಷೆ ಹಾಗೂ ಘಟಕ ಪರೀಕ್ಷೆಗಳ ವಿಶ್ಲೇಷಣೆ ಮಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆ ಗದಗ, ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿ ಇವರ ಸಹಯೋಗದಲ್ಲಿ ಆದರ್ಶ ಶಿಕ್ಷಣ ಸಮಿತಿಯ ಕಾಮರ್ಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗದಗ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ಅಡಿಯಲ್ಲಿ ನಡೆಸಬೇಕಿದ್ದು, ಎಸ್ ಎ1 ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಇರುವ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. ಪ್ರತಿ ಶಾಲಾ ಹಂತದಲ್ಲಿ ಪ್ರತಿ ದಿನ ಎರಡು ವಿಷಯಗಳ ಕಾರ್ಯಾಗಾರ ಹಮ್ಮಿಕೊಂಡು 6 ವಿಷಯಗಳ ಕಠಿಣ ಹಾಗೂ ಮುಖ್ಯಾಂಶಗಳಲ್ಲಿ ಮಗು ಕಲಿಯದ ಹಾಗೂ ಅರ್ಧ ಕಲಿತ ಅಂಶಗಳ ವಿಷಯವಾರು ಪಟ್ಟಿ ಮಾಡಿ, ಈ ಕುರಿತು ತಮ್ಮ ಶಾಲೆಯ ಶಿಕ್ಷಕರು ಹಾಗೂ ಅಗತ್ಯಾನುಸಾರ ಇತರ ಶಾಲಾ ಶಿಕ್ಷಕರನ್ನು ಆಹ್ವಾನಿಸಿ ಕಾರ್ಯಾಗಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿಗಳಾದ ಎಂ.ಎಚ್. ಕಂಬಳಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ನ ಪದಾಧಿಕಾರಿಗಳು ಹಾಜರಿದ್ದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಉಪಸ್ಥಿತರಿದ್ದು, ಇಲಾಖೆಯ 20 ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ. ಎಲ್ಲಾ ಪ್ರಯತ್ನಗಳು ಪರಿಣಾಮಕಾರಿಯಾಗಿರಲಿ, ಪ್ರತಿ ಶಾಲೆಯ ಎಲ್ಲಾ ಶಿಕ್ಷಕರು ಮಗುವನ್ನು ಬೆಂಬಲಿಸುವ ಮೂಲಕ ಅನುಸರಿಸಬೇಕು ಎಂದರು.



