ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಹಾಗೂ ಓಮನ್ ಘಟಕ ಮಸ್ಕತ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಓಮಾನಿನ ಎಲ್ಲಾ ಕನ್ನಡಪರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಸ್ಕತ್‌ನಲ್ಲಿ ನಡೆಯುವ 2025ನೇ ಸಾಲಿನ `ಗಡಿನಾಡು ಉತ್ಸವ’ ಕಾರ್ಯಕ್ರಮವನ್ನು ಸಭಾಪತಿ ಬಸವರಾಜ್ ಹೊರಟ್ಟಿಯವರು ಉದ್ಘಾಟಿಸಲಿದ್ದಾರೆಂದು ಸಭಾಪತಿಯವರೊಂದಿಗೆ ಪ್ರವಾಸಕ್ಕೆ ತೆರಳಲಿರುವ ಆಪ್ತ ಕಾರ್ಯದರ್ಶಿ ಡಾ. ವಿಶ್ವನಾಥ ಗುರುಶರಣಯ್ಯ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಎಪ್ರಿಲ್ 18ರಂದು ಓಮನ್ ದೇಶದ ಮಸ್ಕತ್‌ನ ಮಜಾನ್ ಹೈಗ್ಲ್ ಸಭಾಂಗಣ, ಇಂಡಿಯನ್ ಸ್ಕೂಲ್ ಬಳಿ ವಾದಿ ಕಬೀರ್ ಮಸ್ಕತ್‌ನಲ್ಲಿ ಏರ್ಪಡಿಸಲಾಗಿದೆ. ಕೇರಳದ ಕನ್ನಡಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಗಲ್ಫ್ ರಾಷ್ಟçಗಳಲ್ಲಿ ನೆಲೆಸಿರುವ ಗಡಿನಾಡ ಕನ್ನಡಿಗರನ್ನು ಒಗ್ಗೂಡಿಸಿ ಪ್ರತಿವರ್ಷ ಗಡಿನಾಡು ಉತ್ಸವವನ್ನು ಆಚರಿಸುತ್ತಾ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಓಮನ್ ದೇಶದಲ್ಲಿ ನೆಲೆಸಿರುವ ಸುಮಾರು 1000ಕ್ಕೂ ಹೆಚ್ಚು ಗಡಿನಾಡು ಕನ್ನಡಿಗರು ಭಾಗವಹಿಸಲಿದ್ದಾರೆ. ಕರ್ನಾಟಕದ ಅನೇಕ ಜಾನಪದ, ಯಕ್ಷಗಾನ ಇನ್ನಿತರ ಕಲಾ ರೂಪಕಗಳು ಪ್ರದರ್ಶನಗೊಳ್ಳಲಿವೆ.
ಕನ್ನಡದ ನಂಟನ್ನು ಬಿಡದ ಕನ್ನಡಿಗರ ಸ್ವಾಭಿಮಾನವನ್ನು ಹೆಚ್ಚಿಸುವ ಈ ಗಡಿನಾಡು ಉತ್ಸವ ಅತ್ಯಂತ ಅರ್ಥಪೂರ್ಣವಾಗಿ ಜರುಗಲಿದ್ದು, ಸಭಾಪತಿ ಹೊರಟ್ಟಿಯವರು ಚಾಲನೆ ನೀಡಲಿದ್ದಾರೆ ಎಂದು ಡಾ. ವಿಶ್ವನಾಥ ತಿಳಿಸಿದ್ದಾರೆ.