ಬೆಂಗಳೂರು:- ಏಯ್.. ಗೂಂಡಾಗಿರಿ ಬಿಟ್ಟುಬಿಡಿ, ಇಲ್ಲಿ ಬಾಸಿಸಂ ನಡೆಯಲ್ಲ ಎಂದು ದರ್ಶನ್ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್ ವಾರ್ನಿಂಗ್ ಕೊಟ್ಟಿದ್ದಾರೆ.
ಕಿಡಿಗೇಡಿಗಳಿಂದ ತಮಗೆ ಜೀವ ಬೆದರಿಕೆ ಹಾಕುತ್ತಿರುವ ಬಗ್ಗೆ ಮಾತನಾಡಿದ ಪ್ರಥಮ್, ದರ್ಶನ್ ಅಭಿಮಾನಿಗಳಿಗೆ ನಯವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಗೂಂಡಾಗಿರಿ ಬಿಟ್ಟುಬಿಡಿ.. ಬಾಸಿಸಂ ನಡೆಯಲ್ಲ.. ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ. ಎಲ್ಲಾ ಹೆಸ್ರುಗಳು ಹೇಳಿದ್ರೆ ಇಷ್ಟೊತ್ತಿಗೆ ಏನೇನೋ ಆಗ್ತಿತ್ತು. ಬೆಂಕಿ ಹೊತ್ತಿಕೊಳ್ತಿತ್ತು. ದರ್ಶನ್ ಸರ್ ನಿಮ್ ಹುಡುಗ್ರುಗೆ ಹೇಳಿ. ಇಲ್ಲಿಯವರೆಗೆ ಪ್ರಥಮ್ ಹಾಸ್ಯ, ತುಂಟಾಟ ಮಾತ್ರ ನೋಡಿದ್ದಾರೆ. ಹಾಗೆಯೇ ನೋಡಿದ್ರೆ ಚೆಂದ. ಪ್ರೀತಿಯಿಂದ ಹೇಳ್ತಿದ್ದೀನಿ ಸರ್.. ನಿಮ್ಮ ಅಭಿಮಾನಿಗಳಿಗೆ ಹೇಳಿ ಅಂತ ಹೇಳಿದ್ದಾರೆ.
ದರ್ಶನ್ ಹೆಸರನ್ನ ಅಭಿಮಾನಿಗಳು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ. ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ. ಕರ್ನಾಟಕದಲ್ಲಿ ಕನ್ನಡ ಬಾಸ್… ಕನ್ನಡಿಗರು ನನಗೆ ಬಾಸ್.. ಅವರವರ ಅಪ್ಪ-ಅಮ್ಮ ಅವರಿಗೆ ಬಾಸ್. ಯಾರಾದ್ರೂ ಮೀಡಿಯಾಗೆ ಏನ್ರಿ ಮೀಡಿಯಾ ಅಂದ್ರೆ… ಕಿರಿಟಕ್ಕೆ ಸಮಾನ ಅನ್ನಬೇಕು ಕಲಾವಿದರು. ಮೀಡಿಯಾದಿಂದ ಅನ್ನ ತಿಂತಿದ್ದೀವಿ ಅಂತ ದರ್ಶನ್ ಅಭಿಮಾನಿಗಳನ್ನ ಕುಟುಕಿದ್ದಾರೆ. ದರ್ಶನ್ ಸರ್ ವಿ ಲವ್ ಯು ಸರ್, ನೀವು ಚೆನ್ನಾಗಿ ಬದುಕಿ ಎಂದರಲ್ಲದೇ ಶಿವಣ್ಣ, ಸುದೀಪ್‌ಗೆ ಒಳ್ಳೆದಾಗ್ಲಿ. ಅವ್ರು ದೊಡ್ಡ ಕಲಾವಿದರು ಎನ್ನುತ್ತಲೇ ದರ್ಶನ್‌ಗೆ ತಿವಿದಿದ್ದಾರೆ.
ಪ್ರಥಮ್ ಗೆ ಜೀವಬೆದರಿಕೆ:
ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?
ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡ್ತೀವಿ ಎಂದರು.